ಶ್ರೀ ಚಕ್ರ, ಶ್ರೀ ವಿಧ್ಯೆ - 2
ವಿನಾಶಕಾರೀ ಕ್ಷುದ್ರೋಪಾಸನೆ! ಎಚ್ಚರ!!
(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)
ಇನ್ನು ಪ್ರಸಕ್ತ ಕಾಲದಲ್ಲಿ ಬಳೆಯಲ್ಲಿದ್ದ ಶ್ರೀಚಕ್ರ ಯಂತ್ರ ಯಾವುದು ಎಂದು ಪರಿಚಯಿಸುತ್ತೇನೆ.
"ಬಿಂದು-ತ್ರಿಕೋಣ-ವಸುಕೋಣ-ದಶಾರಯುಗ್ಮಂ-
ಅನ್ವಶ್ಚ ನಾಗದಳ ಸಂಯುತ ಷೋಡಶಾರಂ"
ಎಂಬ ಸೂತ್ರದ ಈ ಯಂತ್ರವು ಹೀಗೆ ಅರ್ಥೈಸಿದಲ್ಲಿ ಇದೊಂದು ಬೆಳಕನ್ನು ಶಬ್ದವಾಗಿ ಪರಿವರ್ತಿಸಿ ಹಿಂದೆ ಸೂಚಿಸಿದ ಬೀಜಾಕ್ಷರ ಸಂಯೋಜನೆಯಿಂದ ಮರ್ಧಿಸಿದಾಗ ಇದೊಂದು ಮೋಹನ ಯಂತ್ರವಾಗುತ್ತದೆ. ಏಕೆಂದರೆ, ಬಿಂದುವಿನಿಂದ ಹೊರಟ ಬೀಜರೂಪದ ನಾದವು ಬೆಳಕಿನ ಕಿರಣ ರೂಪಧರಿಸಿ ಮೂರಾಗಿ ಅದು ವಿಭಜನೆ ಹೊಂದುವುದಲ್ಲದೆ, ಸಪ್ತಸ್ವರ ರೂಪ ಅಲ್ಲದೆ ಕಿರಣವೊಂದು ಸೇರಿ ಎಂಟಾಗಿ ವಿಭಜಿಸಲ್ಪಟ್ಟು ಅಲ್ಲಿಂದ ಅದು ಮೋಹಿಸಲ್ಪಟ್ಟು ದಶಾರಯುಗ್ಮವಾಗುತ್ತದೆ. ಅಂದರೆ ಒಂದರಲ್ಲಿ ಒಂದು ವಿಲೀನವಾಗುವ ಹಂತದಲ್ಲಿರುತ್ತದೆ. ಅಲ್ಲಿಂದ ಅದು ವೃತ್ತದಲ್ಲಿ ನಿಕ್ಷೇಪಿಸಲ್ಪಟ್ಟು ಕಾಂತಕಿರಣವಾಗಿ ರೂಪಾಂತರ ಹೊಂದಿ ನಿರಪಾಯಕಾರಿಯಾಗಬಹುದು. ಆದರೆ, ಅದು ಕಾಂತಕಿರಣವಾಗಿ ಪರಿವರ್ತನವಾಗಬೇಕಾದರೆ ಮುಖ್ಯವಾಗಿ ಬಿಂದು ರೂಪದ ಆದಿ ಬೀಜವು ಸಮರ್ಪಕವಾಗಿರಬೇಕು. ಇಲ್ಲವಾದಲ್ಲಿ ಅದು ಕೃಷ್ಣಕಿರಣವಾಗಿ ರೂಪಾಂತರ ಹೊಂದಿದಲ್ಲಿ ಅದು ಮಾರಕ ಪರಿಣಾಮ ಉಂಟುಮಾಡುತ್ತದೆ. ಈಗಿನ ಖಗೋಳ ವಿಜ್ಞಾನವು ಕಂಡುಹಿಡಿದ ಕೃಷ್ಣರಂಧ್ರ (Black Hole) ಎಂಬ ಶೂನ್ಯವು ನಿಮಗೆ ಗೊತ್ತಿರಬಹುದು. ಅದು ಇಲ್ಲಿಯೂ ಕೂಡ ಸೃಷ್ಟಿಯಾಗಬಹುದು. ಅಣುವಿಧ್ಯೆಗಿಂತಲೂ ಮಾರಕವಾದ ಈ ವಿಧ್ಯೆ ಸಾರ್ವತ್ರಿಕವಾಗಿ ಈ ವಿಚಾರದಲ್ಲಿ ಬಾಲಕ ಸಮಾನರಿಗೆ ಸಿಕ್ಕಿದರೆ ಏನು ಅನಾಹುತ ಆಗಬಹುದು ಎಂದು ನಿಮಗೆ ಅರ್ಥವಾಗಿರಬಹುದು. ಕಿರಣದಿಂದ, ಸೂಕ್ಷ್ಮಕಿರಣದಿಂದ ಏನೇನೂ ಸಾಧಿಸಬಹುದು ಎಂದು ಬಾಲ್ಯಾವಸ್ಥೆಯಲ್ಲಿ ಅಂದರೆ ೩೦೦-೪೦೦ ವರ್ಷಗಳ ಇತಿಹಾಸವಿರುವ ಮುಂದುವರೆದ ಈ ನೂತನ ವೈಜ್ಞಾನಿಕ ಯುಗವನ್ನು ಗಮನಿಸಿದರೆ ನಿಮಗೆ ಅರ್ಥವಾಗಬಹುದು. ಹಿಂದಿನ ಋಷಿ ಮುನಿಗಳು ಹತ್ತಾರು ಸಾವಿರ ವರ್ಷಗಳ ಅಧ್ಯಯನದಿಂದ ಕಂಡುಕೊಂಡ ಹೆಚ್ಚು ಮುಂದುವರಿದ ಕಿರಣವಿಜ್ಞಾನ ನೀವೇ ಊಹಿಸಿ. ನಿಮಗೆ ಸೂಕ್ತವಾದರೆ ಸ್ವೀಕರಿಸಿ, ಇಲ್ಲ ಈ ವಿಚಾರವಾಗಿ ವಿಶೇಷಾಧ್ಯಯನ ಮಾಡಿ, ಆದರೆ ಬಳಸಬೇಡಿ.
ಅದೇ ಸೂತ್ರದ ಇನ್ನೊಂದು ಯಂತ್ರ, ಅದೂ ಕೂಡ ಶ್ರೀಚಕ್ರವೆಂದು ಇಲ್ಲಿ ಬಳಸಲ್ಪಟ್ಟಿದೆ, ಬಳಸಲ್ಪಡುತ್ತಿದೆ. ಅದು ಹೀಗಿದೆ
"ಬಿಂದು-ತ್ರಿಕೋಣ-ವಸುಕೋಣ-ದಶಾರಯುಗ್ಮ-
ಮನ್ವಶ್ಚ ನಾಗದಳ ಸಂಯುತ ಷೋಡಶಾರಂ"
ಎಂಬ ಮತ್ತು ವೃತ್ತ ಭೂಪುರ ಎಲ್ಲವಕ್ಕೂ ಇರುವಂತಹದ್ದು. ಇಲ್ಲಿ ನೋಡಿ, ಬಿಂದು ಅಂದರೆ ಒಂದು ಅಥವಾ ಶೂನ್ಯ. ಶೂನ್ಯದಿಂದ ಮೂರು, ಮೂರು ಎಂಟಾಗಿ, ಎಂಟು ಹತ್ತಾಗಿ, ಹತ್ತು ಎರಡಾಗಿ, ನಂತರ ಹದಿನಾಲ್ಕು ಆಗುತ್ತದೆ. ಇಲ್ಲಿ ನಿಜವಾಗಿ ಹದಿನಾಲ್ಕು ಆಗುವುದಿಲ್ಲ. ಈ ಶ್ಲೋಕ ರೀತ್ಯಾ ಆದರೆ ಹದಿನಾಲ್ಕು ಆಗಿದೆ ಎಂದು ಈ ಮೂಲ ಶ್ಲೋಕವನ್ನೇ ಉದಾಹರಿಸಿ ಯಂತ್ರ ರಚಿಸಿರುತ್ತಾರೆ. ಇಲ್ಲಿ ಯುಗ್ಮಂ ಅನ್ವಶ್ಚ ಎನ್ನುವುದನ್ನು ಯುಗ್ಮ-ಮನ್ವಶ್ಚ ಎಂಬುದಾಗಿ ವಿಭಾಗಿಸಿ ಹದಿನಾಲ್ಕನ್ನು ಸೂಚಿಸಿದ್ದಾರೆ. ಆದರೆ ಯುಗ್ಮಂ ಇದು ದಶಾರದ ಎರಡನ್ನು ಸೂಚಿಸುವುದಕ್ಕೆ ದ್ವಿವಚನ ರೂಪವೇ ವಿನಃ ಮಕಾರವು ಮನ್ವಶ್ಚ ಎಂಬುದಕ್ಕಾಗಿ ಬಂದದ್ದಲ್ಲ. ಅಲ್ಲಿ ಅನ್ವಶ್ಚವೇ ಸರಿ, ಅಂದರೆ ಹೊಂದಿದಂತೆ ನಾಗದಳ ಅಂದರೆ, ಅಷ್ಟದಳ ಎಂದು ಅರ್ಥೈಸಬೇಕಿತ್ತಲ್ಲವೇ? ಇನ್ನು ಈ ವಿಚಾರವಾಗಿ ನೀವೇ ಆಲೋಚಿಸಿ!!
ಈ ಯಂತ್ರ ಸ್ವರೂಪವು ತಾಂತ್ರಿಕ ಸ್ವರೂಪಕ್ಕೆ ಹೊಂದುತ್ತದೆಯೇ? ನೋಡೋಣ. ಖಂಡಿತಾ ಇಲ್ಲ. ಹೇಗೆಂದರೆ ೧-೨-೪-೮-೧೦-೧೪ ಈ ಅನುಪಾತವನ್ನು ಗಮನಿಸಿದಾಗ ಅಲ್ಲಿ ೮ ಅಪ್ರಸ್ತುತವಾಗುತ್ತದೆ. ೮ ಆಗಲೇ ಸಾಧ್ಯವಿಲ್ಲವೆಂದಾದಾಗ ಹತ್ತು-ಎರಡುಗಳು ಹದಿನಾಲ್ಕಕ್ಕೂ ಅರ್ಥವಿಲ್ಲ. ಹಾಗಿದ್ದರೆ ಇದೇನು? ಇದು ಯಾರಿಂದ ಕಂಡು ಹಿಡಿಯಲ್ಪಟ್ಟಿತೋ ಅವರಿಂದಲೇ ಇದು ಮಾರಕ, ಆಪತ್ಕಾರೀ, ದೋಷಪೂರಿತ; ಈ ರೀತಿ ಯಂತ್ರ ಬಳಸಬಾರದು ಎಂದು ನಿಷೇಧಿಸಲ್ಪಟ್ಟಂತಹ ಶಾಪಗ್ರಸ್ತ ಯಂತ್ರ!!!
ಒಂದು ಸಾಮಾನ್ಯ ಯಂತ್ರದ ವಿಚಾರವನ್ನೇ ತೆಗೆದುಕೊಳ್ಳಿ. ಅದು ಆ ಕಂಪನಿಯು ರಸ್ತೆ ಮೇಲೆ ಅಂದರೆ ಮಾರುಕಟ್ಟೆಗೆ ಬಿಡುಗಡೆ ಮಾಡುವುದಕ್ಕೆ ಮುಂಚೆ ಪರೀಕ್ಷೆಗೆ ಒಳಪಟ್ಟು ಸರಕಾರದಿಂದ ಅಂದರೆ (ಆಗಿನ ಕಾಲದ ಧರ್ಮದಿಂದ) ನಿರೀಕ್ಷಕರಿಂದ ಇದು ಸುರಕ್ಷಿತ ಎಂದು ಅರ್ಹತಾ ಪತ್ರ ಪಡೆಯಬೇಕು ತಾನೇ? ಹಾಗೆಯೇ, ಈ ಯಂತ್ರವು ರೇಖಾವಿನ್ಯಾಸ ರೀತ್ಯಾ ಯಂತ್ರ ಸ್ವರೂಪವನ್ನು ಹೊಂದಿದರೂ ಇದು ಇದರ ಒಟ್ಟು ಪರಿಣಾಮವನ್ನು ವಿನ್ಯಾಸದಂತೆಯೇ ನಡೆಯಗೊಟ್ಟಲ್ಲಿ ಅದು ಒಂದು ಸ್ಥಂಭನ ಯಂತ್ರವಾಗುತ್ತದೆ. ಆದರೆ, ಇದರ ವಿಶೇಷವೆಂದರೆ ಯಾವುದೋ ಒಂದು ರೀತಿಯಲ್ಲಿ ಇದು ಸ್ಥಂಭಿಸಿದವನನ್ನೇ ಆಹುತಿಯಾಗಿ ಪಡೆಯುತ್ತದೆ. ಏಕೆಂದರೆ ಸಮೀಪಸ್ಥನು ಆತನೇ ತಾನೇ? ಮತ್ತು ಸ್ಥಂಭನವು ಆಸ್ಪೋಟನೆಯಾಗುತ್ತದೆಯೇ ವಿನಃ ಬಿಡಿಸಲಾರದು, ಹಾಗಾಗಿ ಇದು ಒಂದು ಮಾರಕ ಸ್ಥಂಭನ ಯಂತ್ರ. ಇದು ಒಮ್ಮೆ ಸ್ಥಂಭಿಸಲ್ಪಟ್ಟರೆ ಯಾವುದೇ ಕಾರಣ ಬಿಡಿಸಲಾರದ ಒಂದು ಸ್ಥಂಭನವಾಗುತ್ತದೆ. ಅಲ್ಲದೇ ಸ್ಥಂಭಕನೂ ಕೂಡ ಅದನ್ನು ಏನೂ ಮಾಡಲಾರ. ಅವನೇ ಅದಕ್ಕೆ ಆಹುತಿಯಾದ ವಿಚಾರ ಬೇಕಾದಷ್ಟು ಉದಾಹರಣೆ ಇದೆ. ಹಾಗಿದ್ದರೆ ಇದರ ಮೂಲವೆಲ್ಲಿ?
ಹಿಂದೆ ವೈದಿಕರು, ಸನಾತನಿಗಳು, ತಮ್ಮ ಮಡಿವಂತಿಕೆಯಿಂದ ಯಾರನ್ನು ದೂರ ಇಟ್ಟಿದ್ದರೋ ಆ ತಾಂತ್ರಿಕರ ಮೂಲ ಪುರುಷರು ಕೆಲ ನಾಥಪಂಥೀಯರಿಂದ ಪೋಷಿಸಲ್ಪಟ್ಟು ಅನಾಥರಾದ ತಾಂತ್ರಿಕರು ನಾಥಪಂಥೀಯರ ಆಶ್ರಯದಲ್ಲಿ ಬೆಳೆದರು. ಅವರಲ್ಲಿ ಮಹಾ ಪುರುಷನಾದ ವೃಷಭೇಂದ್ರನಾಥರೆಂಬ ಮಹಾನ್ ಸಿದ್ಧಪುರುಷ ಈ ಯಂತ್ರದ ಜನಕರು. ಈಗಲೂ ಕೂಡ ಯಾವುದೇ ಸಂಶೋಧನೆಯಲ್ಲಿ ತೊಡಗಿದಾಗ ಯಾವುದೋ ತೊಡಗುವುದು ಅನಿರೀಕ್ಷಿತ. ಹೀಗೆ ಸಾಧನೆಯಲ್ಲಿರುವಾಗ ಕಂಡುಕೊಂಡ ಈ ಸೂತ್ರವೊಂದು ಅಪಾಯಕಾರಿಯೆಂದು ಕಂಡಾಗ ಅದನ್ನು ನಿಷೇಧಿಸಿ ಶಪಿಸಿದರು. ಆದರೆ ಮುಂದೆ ಆ ಪರಂಪರೆಯಲ್ಲಿ ಅವರ ಆದರ್ಶವನ್ನೆಲ್ಲಾ ಗಾಳಿಗೆ ತೂರಿದ ಹಿಂಬಾಲಕರು ಅದನ್ನು ಕೆಲ ವಾಮಮಾರ್ಗದಲ್ಲಿ ಬಳಸುತ್ತಾ ಬಂದರು. ಅದು ಬಿಂದು ರಹಿತವಾಗಿದ್ದು, ಕಾಪಾಲಿಕರು, ಅಘೋರಿಗಳು ಶವಸಾಧನಾ ಯಂತ್ರವಾಗಿ ಬಳಸುತ್ತಿದ್ದಾರೆ. ಇನ್ನು ಕೌಲಮಾರ್ಗದಲ್ಲಿ ಹಠಯೋಗ ಸಾಧಕರು ಇದನ್ನು ಇನ್ನೂ ಹೇಯ ರೀತಿ ಬಳಸುತ್ತಿದ್ದಾರೆ. ಅದೆಲ್ಲಾ ಇಲ್ಲಿ ಉದಾಹರಿಸಲಾರೆ. ಅದಕ್ಕೆ ಸಂಯೋಜಿಸಲ್ಪಟ್ಟ ಬೀಜವು ಮೂಲತಃ ತಮೋಗುಣ ಪ್ರಧಾನವಾಗಿದ್ದು ಅದು ಕಿರಣ ಸಂಯೋಜನೆಯನ್ನಾಗಲಿ ಅಥವಾ ನಾದ ಸಂಯೋಜನೆಯನ್ನಾಗಲೀ ಮಾಡಲಾರದೇ ಎಲ್ಲವನ್ನೂ ತನ್ನಲ್ಲಿ ಸೇರಿಸಿಕೊಳ್ಳುವ ಕೆಟ್ಟ ಗುಣವನ್ನು ಹೊಂದಿರುತ್ತದೆ. ಚತುಷ್ಕೋಣವನ್ನೇ ಸಂಯೋಜಿಸಿ ಇನ್ನೊಂದು ಶ್ರೀಚಕ್ರವಿದೆ. ಅದೂ ಕೂಡಾ ಅಪೂರ್ಣವೇ! ಅದಕ್ಕೆ ಯುಕ್ತ ಬೀಜ ಮಂತ್ರ ಬಳಸಿಲ್ಲ. ಅದು ರುದ್ರಯಾಮಲ ತಂತ್ರದಲ್ಲಿದೆ. ಅದರ ಸೂತ್ರ ಹೀಗಿದೆ:
ಚತುರಸ್ರಂ ಲಿಖೇತ್ ವರ್ಣಾಂ ಚತುಃಕೋಷ್ಠ ಸಮನ್ವಿತೇ |
ಚತುಃಕೋಷ್ಠೇ ಚತುಃಕೋಷ್ಠೇ ಚತುರ್ಗೃಹಾನ್ವಿತಾಂ |
ಮಂದಿರಂ ಷೋಡಶಂ ಪ್ರೋಕ್ತಂ ಸರ್ವಕಾಮಾರ್ಥ ಸಿದ್ಧಿದಂ |
ಚತುರಸ್ರಂ ಲಿಖೇತ್ ಕೋಷ್ಠಂ ಚತುಃಕೋಷ್ಠ ಸಮನ್ವಿತಂ ||
ಪುನಃ ಚತುಷ್ಕಂ ತತ್ರಾಪಿ ಲಿಖೇತ್ ಧೀಮಾನ್ ಕ್ರಮೇಣತು |
ಸರ್ವೇಷು ಗೃಹಮಧ್ಯೇಷು ಪ್ರಾದಕ್ಷಿಣ್ಯ ಕ್ರಮಾತ್ |
ಅಕಾರಾದಿ ಕ್ಷಕಾರಾಂತಂ ಲಿಖಿತ್ವಾ ಗಣಯೇತ್ತತಃ ||
ಈ ರೀತಿಯ ಸೂತ್ರದಂತೆ ರಚಿಸಿದಲ್ಲಿ ಇಲ್ಲಿನ ಶ್ರೀಚಕ್ರಕ್ಕೆ ಸಾಮೀಪ್ಯವಿರುವ ಒಂದು ಗೊಂದಲಮಯವಾದ ಯಂತ್ರ ರಚನೆಯಾಗುತ್ತದೆ. ಇದು ಒಂದು ರುದ್ರಯಾಮಲ ತಂತ್ರದಲ್ಲಿರುವಂತಹದ್ದು. ಆದರೆ ಈ ರೀತಿಯ ಬೇರೆ ಬೇರೆ ಪ್ರಕಟಿತ ರುದ್ರಯಾಮಲ ತಂತ್ರ ನನ್ನಲ್ಲಿದೆ. ಅದರಲ್ಲಿ ಮೂಲ ರುದ್ರಯಾಮಲ ಯಾವುದು? ಹೇಳಲಸಾಧ್ಯ. ಅವೆಲ್ಲಾ ಬೇರೆ ಬೇರೆ ರೀತಿಯ ಶ್ರೀಚಕ್ರವನ್ನು ಹೇಳಿರುತ್ತದೆ. ಆದರೆ ಯಾವುದೂ ಕೂಡ ಕೋಣ ಸಂಯೋಜನೆಯಲ್ಲಾಗಲೀ ಅಥವಾ ಬೀಜ ಸಂಯೋಜನೆಯಲ್ಲಾಗಲೀ ಯಶಸ್ವಿಯಾಗಿಲ್ಲವೆಂದು ಖಂಡಿತವಾಗಿ ಹೇಳಬಲ್ಲೆ.
ಇನ್ನು ಮಂತ್ರ ಮಹೋದಧಿಯಲ್ಲಿ ಇನ್ನೊಂದು ಸೂತ್ರ -
ಶ್ರೀಚಕ್ರಸ್ಯೋದ್ಧತಿಂ ವಕ್ಷೇ ತತ್ರಪೂಜರ ಸಿದ್ಧಯೇ |
ಬಿಂದುಗರ್ಭಂ ತ್ರಿಕೋಣಂತು ಕೃತ್ವಾಚಾಷ್ಟಾರ ಮುದ್ಧರೇತ್ |
ದಶಾರದ್ವಯಮನ್ವಾಸ್ರಾಷ್ಟಾರ ಷೋಡಶಕೋಣಕಂ |
ತ್ರಿರೇಖಾತ್ಮಕ ಭೂಗೇಹವೇಷ್ಟಿತಂ ಯಂತ್ರಮಾಲಿಖೇತ್ ||
ಹೀಗೆ ಉದ್ಧರಿಸಿದ್ದಾರೆ. ಇದೂ ಕೂಡ ಈಗಿನ ಪ್ರಚಲಿತ ಶ್ರೀಚಕ್ರಕ್ಕೆ ಅತೀ ಸಾಮೀಪ್ಯವಿರುವ ರಚನೆ. ಆದರೆ ಪ್ರಚಲಿತ ಚಕ್ರದ ವಿವರಕ್ಕೆ ವಿರುದ್ಧವಾಗಿದೆ. ಇದೂ ಕೂಡ ಬೀಜದ ದೃಷ್ಟಿಯಿಂದ ನಿರುಪಯುಕ್ತ ಯಂತ್ರ.
ಮಂತ್ರ ಮಹಾರ್ಣವದಲ್ಲಿ:
ಬಿಂದುಗರ್ಭಂ ತ್ರಿಕೋಣಾಷ್ಟದಲಂ ದ್ವಾದಶದಲಂ
ಚತುರ್ದಶದಲ ಅಷ್ಟದಲ ಷೋಡಶ ತ್ರಿಕೋಣ
ರೂಪದಲಂಚ ತಸ್ಯೋಪರಿ ತ್ರಿರೇಖಾತ್ಮಕ ಭೂಪುರಮ್ ||
ಎಂದು ಹೇಳಿದೆ. ಇದನ್ನೂ ಶ್ರೀಚಕ್ರವೆಂದಿದ್ದಾರೆ. ಅಲ್ಲದೇ ಇನ್ನೂ ನನ್ನ ವೈಯಕ್ತಿಕ ಸಂಗ್ರಹದಲ್ಲಿರುವ ತಾಳಪತ್ರಗಳು, ಹಳೆಗ್ರಂಥಗಳು, ಪುರಾತನ ಪ್ರಕಟಿತ ಗ್ರಂಥಗಳೂ, ಭೂರ್ಜಪತ್ರ ಗ್ರಂಥಗಳೂ ಅಲ್ಲದೆ ನನ್ನ ಸ್ವಂತ ಗ್ರಂಥಾಲಯದಲ್ಲಿ ಸಂಗ್ರಹಿಸಿದ ಗ್ರಂಥಗಳೂ, ನಮ್ಮ ಗುರು ಪರಂಪರೆಯಿಂದ ನನಗೆ ಲಭ್ಯವಾದ ಗ್ರಂಥಗಳೂ ಹಲವಾರಿವೆ. ಆ ಎಲ್ಲಾ ಗ್ರಂಥಗಳಲ್ಲಿ ಅಲ್ಲಲ್ಲಿ ಶ್ರೀವಿಧ್ಯಾ ಮಹತ್ವ ಮತ್ತು ಉಪಯುಕ್ತತೆ, ನಿರುಪಯುಕ್ತತೆ, ಅದರಿಂದ ಆಗತಕ್ಕ ದೋಷಗಳು, ಪರಿಣಾಮ, ನಷ್ಟ, ಬೀಜ ಸಂಯೋಜನೆ, ಯಂತ್ರ ಜನಕರ ವಿವರ, ಯಂತ್ರವಿಧ್ಯಾಸ್ವರೂಪ, ತಾಂತ್ರಿಕರಿಗೆ ಇರಬೇಕಾದ ಅರ್ಹತೆ, ಪ್ರಸಿದ್ಧ ತಾಂತ್ರಿಕರ ಪರಿಚಯ, ಅವರ ಹಿನ್ನೆಲೆ, ಅವರ ಉಳಿಕೆ ವೈಯಕ್ತಿಕ ವಿವರ, ಅದರಿಂದಾದ ಅನಾಹುತಗಳ ವಿವರ, ಸತ್ಕಾರ್ಯ ವಿವರ, ಅದರ ಪರಿಮಾರ್ಜನೆಗಾಗಿ ಶ್ರಮಿಸಿದ ಶ್ರಮಿಕರ ವಿವರ, ಆ ಸಂದರ್ಭದಲ್ಲಾದ ಉತ್ಪಾತಗಳು, ಸಾರ್ವಜನಿಕ ಪ್ರತಿಭಟನೆ ಇತ್ಯಾದಿ ಇತ್ಯಾದಿ ಹಲವಾರು ವಿವರಗಳಿರುವ ಸಾಹಿತ್ಯ ಭಾಗ ನನ್ನಲ್ಲಿದೆ. ಅವುಗಳ ವಿವರ ಬರೆಯಲಾರೆ. ಆದರೆ ನಾನು ಓದಿದ, ಕಲಿತ, ಗುರು ಅನುಗ್ರಹವಾದ ವಿಧ್ಯೆಯ ಆಧಾರದಿಂದ ಹೇಳಬಲ್ಲೆ.
ಈ ತಾಂತ್ರಿಕ ಯಂತ್ರ ಸ್ವರೂಪ ಒಂದು ಕ್ಷುದ್ರೋಪಾಸನೆ. ಇದು ಕೇವಲ ಒಂದು ಸ್ಥಂಭನ ಯಂತ್ರ ಎಂದು ಸಾಧಿಸಿ ತೋರಿಸಲೂ ಬಲ್ಲೆ; ಅನಿವಾರ್ಯವಾದರೆ. ಇನ್ನೂ ಹೆಚ್ಚಿನ ಗ್ರಂಥ ವಿವರ ಈ ಲೇಖನದ ಆದಿಯಲ್ಲಿ ಕೊಟ್ಟಿರುತ್ತೇನೆ. ಅವುಗಳನ್ನು, ಸಜ್ಜನರಾದಲ್ಲಿ ಅಧ್ಯಯನಕ್ಕೆ ಅರ್ಹತೆಯಿದ್ದಲ್ಲಿ ನಿಮಗೆ ವಿಶೇಷಾಧ್ಯಯನಕ್ಕೆ ಒದಗಿಸಿಕೊಡಲು ಸಿದ್ಧನಿದ್ದೇನೆ. ಆದರೆ ಮುಖ್ಯವಾಗಿ ನಿಮ್ಮ ಉದ್ದೇಶ ಸದುದ್ದೇಶವಾಗಿರಬೇಕು. ಈ ವಿಚಾರವಾಗಿ ತಾವು ದಯವಿಟ್ಟು ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೇ ನಿಮ್ಮ ಸ್ವಂತ ಬುದ್ಧಿಯಿಂದ ವಿವೇಚಿಸಿ ಒಂದು ನಿರ್ಣಯಕ್ಕೆ ಬರಬೇಕೇ ವಿನಃ ನಾನೇನು ನಿಮ್ಮ ಮೇಲೆ ಈ ಶ್ರೀಚಕ್ರ, ಶ್ರೀವಿಧ್ಯಾ ವಿಚಾರವಾಗಿ ನಿರ್ಬಂಧ ವಿಧಿಸಲಾರೆ. ಆದರೆ, ನಿಮ್ಮ ಆತ್ಮ ಪರಮಾತ್ಮನ ಅಂಶವೆಂಬುದು ಸತ್ಯ, ಆತ್ಮವಂಚನೆ ಮಾಡಿಕೊಳ್ಳಬೇಡಿ ಎಂದು ಎಚ್ಚರಿಸುತ್ತಿದ್ದೇನೆ, ಅಷ್ಟೆ. ಮುಖ್ಯವಾಗಿ ಮಹಾ ಸಿದ್ಧಪುರುಷರಾದ ವೃಷಭೇಂದ್ರನಾಥರಿಂದ ಅನಿರೀಕ್ಷಿತವಾಗಿ ಕಂಡುಹಿಡಿಯಲ್ಪಟ್ಟು ನಂತರ ಅದರ ಸಾಧಕ-ಬಾಧಕಗಳಿಗೆ ನೊಂದು ಅವರಿಂದಲೇ ನಿಷೇಧಿಸಲ್ಪಟ್ಟಿದೆ ಎಂದು ನಾನು ತಿಳಿದ ಮತ್ತು ನನ್ನಲ್ಲಿರತಕ್ಕ ಸಂಗ್ರಹದ ಆಧಾರದ ಮೇಲೆ ಘಂಟಾಘೋಷವಾಗಿ ಹೇಳುತ್ತೇನೆ. ಈಗಲೂ ನೋಡಿ ಮಹಾ ಪುರುಷರ ನಡತೆ ಹಾಗೇ ಇರುತ್ತದೆ. ನೊಬೆಲ್ ಪಾರಿತೋಷಕ ಉದಾಹರಣೆ ನಿಮಗೆ ಗೊತ್ತಿರಬಹುದು. ಸ್ಪೋಟಕವನ್ನು ಕಂಡುಹಿಡಿದು ಕೊನೆಗ ದುರುಪಯೋಗಗೊಳ್ಳುವುದನ್ನು ನೋಡಿ ನೊಂದ ಆ ಮಹಾಪುರುಷ ನೊಬೆಲ್ಲರು ಮುಂದೆ ಶಾಂತಿಗಾಗ ಹೋರಾಡುವ, ದೇಶಕ್ಷೇಮಕ್ಕಾಗಿ ಹೋರಾಡಿದವರಿಗೆ ಪ್ರಶಸ್ತಿ ಕೊಡಿ, ಅದರಿಂದಲಾದರೂ ನನ್ನಿಂದಾದ ಅನಾಹುತದ ಪಾಪ ಪರಿಮಾರ್ಜನೆಯಾಗಲಿ ಎಂದು ಹಾರೈಸಿದರು. ಹಿಂದಿನ ಮಹಾ ಪುರುಷರ ಆದರ್ಶ ಹಾಗಿರುತ್ತದೆ. ಇನ್ನುಳಿದ ವಿವೇಚನೆ ನಿಮಗೆ ಬಿಟ್ಟದ್ದು. ಇನ್ನು ಪ್ರಸಕ್ತ ಬಳಕೆಯಲ್ಲಿರುವ ಅಜ್ಞಾನದ ಬಗ್ಗೆ ಬರೆಯುತ್ತೇನೆ. ಇದು ತೀರಾ ವಿಡಂಬನವಾಗಿರಬಹುದು, ಆದರೆ ಅನಿವಾರ್ಯ
(ಸಶೇಷ..)
ಇಂತು ಸಜ್ಜನ ವಿಧೇಯ,
ಕೆ. ಎಸ್. ನಿತ್ಯಾನಂದ,
ಪೂರ್ವೋತ್ತರೀಯ ಮೀಮಾಂಸಕರು,
ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು
(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)
No comments:
Post a Comment