💐 ಗೋಪುರ, ಕಳಶ, ಧ್ವಜಸ್ತಂಭ ಇವುಗಳಿಗೂ ದೇವಾಲಯಕ್ಕೂ ಏನು ಸಂಬಂಧ
✍️ ಕೆಲ ಪ್ರಾಂತ್ಯಗಳಲ್ಲಿ ದೇವಾಲಯಗಳಿಗೆ ಗೋಪುರವಿರುತ್ತದೆ. ಅವುಗಳಲ್ಲಿ ಮಹಾದ್ವಾರದ ಮೇಲೆ ರಾಜಗೋಪುರ, ಕೀರ್ತಿಗೋಪುರ, ವಿಜಯಗೋಪುರ, ಗರ್ಭಗೃಹದ ಮೇಲೆ ಧರ್ಮಗೋಪುರ ಹೀಗೆ ಬೇರೆ ಬೇರೆ ದಿಕ್ಕುಗಳಿಗೆ ಹೊಂದಿ ಗೋಪುರ ರಚನಾ ವಿನ್ಯಾಸವನ್ನು ತಂತ್ರ ಶಾಸ್ತ್ರಜ್ಞರೂ, ವಾಸ್ತುಶಾಸ್ತ್ರಜ್ಞರೂ ರೂಪಿಸಿರುತ್ತಾರೆ. ಆಯಾಯ ಗೋಪುರಗಳು ಅಥವಾ ಕಳಶಗಳು ಆ ವಿಚಾರದ ಸಂಕೇತಗಳಾಗಿರುತ್ತದಲ್ಲದೆ ಆಯಾ ವಿಚಾರದಲ್ಲಿ ಮುಖ್ಯವಾಗಿ ರಕ್ಷಣಾತ್ಮಕವಾಗಿರುತ್ತದೆ. ಏಕೆಂದರೆ ರಾಜಗೋಪುರ ವಿನ್ಯಾಸವನ್ನು ತೆಗೆದುಕೊಂಡಾಗ ಪೂರ್ವಾಭಿಮುಖ ದೀರ್ಘ ಚತುರಸ್ರಾಕಾರದ ನೆಲೆಗಟ್ಟಿನ ಮೇಲೆ ಚತುಷ್ಷಷ್ಟಿ ಕೋನಗಳನ್ನು ಒಳಗೊಂಡು ಅಸಮ ಹಂತಗಳಾಗಿ ಅಸಮ ಕಳಶಗಳನ್ನು ಹೊಂದಿ ಮುಖ್ಯವಾಗಿ ಆಕಾಶದಿಂದ ಹೊಡೆಯತಕ್ಕ ಸಿಡಿಲಿನ ಆಘಾತವನ್ನು ಸ್ವೀಕರಿಸುವುದಕ್ಕೆ ಬೇಕಾದ ಮತ್ತು ನೇರವಾಗಿ ಅದನ್ನು ಭೂಮಿಯಲ್ಲಿ ಐಕ್ಯಗೊಳಿಸುವುದಕ್ಕೆ ಬೇಕಾದ ರಕ್ಷಣಾತ್ಮಕ ವ್ಯವಸ್ಥೆಯೊಂದಿಗೆ ಈ ಗೋಪುರ ಕಟ್ಟಲ್ಪಡುತ್ತದೆ. ಆದ್ದರಿಂದಲೆ ದೇವಾಲಯಗಳನ್ನು ಎತ್ತರದ ಬೆಟ್ಟ, ಗುಡ್ಡಗಳಲ್ಲಿ, ಸುತ್ತ-ಮುತ್ತಲ ಗ್ರಾಮಗಳಲ್ಲಿ ಸಿಡಿಲಿನ ಬಾಧೆ ಹೆಚ್ಚಾದಾಗ ಈ ರೀತಿಯ ರಾಜಗೋಪುರವನ್ನು ಕಟ್ಟಿ ಗ್ರಾಮಕ್ಕೆ ರಕ್ಷಣೆಯನ್ನು ಕೊಡುತ್ತಿದ್ದರು. ಆದ್ದರಿಂದ ಈ ಗೋಪುರ ವಿನ್ಯಾಸಕ್ಕೆ ರಾಜಗೋಪುರ ಎಂಬ ಹೆಸರು ಬಂತು. ಹಾಗೆಯೇ ದೇವಾಲಯ ಮತ್ತು ರಾಜಗೋಪುರದ ಮಧ್ಯದಲ್ಲಿ ಧ್ವಜ ಸ್ತಂಭವನ್ನು ಸ್ಥಾಪಿಸಿ ದೇವಾಲಯದಲ್ಲಿ ಇರತಕ್ಕ ಅರ್ಚಕ ಭಕ್ತಾದಿಗಳಿಗೆ ರಾಜಗೋಪುರದಿಂದ ಆಕರ್ಷಿಸಲ್ಪಟ್ಟ ವಿದ್ಯುತ್ಕಾಂತೀಯ ಪರಿಣಾಮಗಳು ಮತ್ತು ಉಪಪರಿಣಾಮಗಳು ಧ್ವಜಸ್ತಂಭ ಮತ್ತು ಅದಕ್ಕೆ ಹೊದಿಸಿದ ಲೋಹದ ಹಾಳೆಗಳಿಂದ ಆಕರ್ಷಿಸಿ ಯಾವುದೇ ರೀತಿಯ ದುಷ್ಪರಿಣಾಮ ಆಗದಂತೆ ಧ್ವಜಸ್ತಂಭವನ್ನು ಸ್ಥಾಪಿಸುತ್ತಿದ್ದರು. ಹಾಗೆಯೇ ಗೋಪುರ ಸ್ಥಾಪನೆಯು ಯಾವುದೇ ಒಂದು ವಿಚಾರದ ರಕ್ಷಣೆ ಅಥವಾ ಪ್ರಚಾರದ ಉದ್ದೇಶದಿಂದ ಸ್ಥಾಪಿಸಲ್ಪಡುತ್ತಿತ್ತು. ವಾಸ್ತು ವಿನ್ಯಾಸಗಾರರು ಕಲಾಪ್ರಿಯರಾಗಿದ್ದರಿಂದ ಕಲಾತ್ಮಕವಾಗಿಯೂ ಅಂದವಾಗಿಯೂ ಕಾಣುವಂತೆ ವಿನ್ಯಾಸಗೊಳಿಸಿದ್ದರು. ಹಾಗಾಗಿ ವಿಶೇಷ ಸ್ಥಳಗಳಿಗೆ ಅಲಂಕಾರಿಕವಾಗಿ ಕಾಣಲೆಂದು ಗೋಪುರ ರಚನೆಯ ಪದ್ಧತಿಯು ಬಳಕೆಗೆ ಬಂದಿತು.
✍️ ಸ್ತ್ರೀ ದೇವತೆಯ ಪೂಜೆಗೆ ಬ್ರಹ್ಮಚಾರಿ ಅಥವಾ ವಿದುರನು ಅನರ್ಹನೆ
💐 ಮಾತೃ ಸ್ವರೂಪಿಯಾದ ಸ್ತ್ರೀ ದೇವತಾ ಪೂಜೆಗೆ ಅನರ್ಹತೆ ಎಂಬುದೇ ಬರುವುದಿಲ್ಲ. ಆದರೆ ಆಧ್ಯಾತ್ಮಿಕ ಜಗತ್ತಿನಲ್ಲಿ ಮುಂದುವರೆದು ಸೇರಿಕೊಂಡ ಕ್ಷಿಪ್ರಫಲದಾಯಕಗಳು, ಅನಂತಸುಖದಾಯಕಗಳು, ಅತುಲೈಶ್ವರ್ಯದಾಯಕಗಳು, ಅತಿಮಾನುಷ ಶಕ್ತಿಪ್ರಧಾಯಕಗಳೆಂದು ಭಾವಿಸಲ್ಪಡುವ ಕೆಲವು ಸ್ತ್ರೀ ದೇವತಾಕವಾದ ಪೂಜಾವಿಧಾನಗಳು ಬಳಕೆಯಲ್ಲಿ ಬಂದವು. ಆಗ ಅಲ್ಲಿ ಈ ಬ್ರಹ್ಮಚಾರಿ, ವಿದುರ ಎಂಬ ಪ್ರಭೇದ ಗಣಿಸಲ್ಪಟ್ಟಿತು. ಈ ಪೂಜಾ ಪದ್ಧತಿಯಲ್ಲಿ ಇರತಕ್ಕಂತಹಾ ಅಂಗ ಪೂಜೆ, ಆವರಣ ಪೂಜೆ, ಇವೆಲ್ಲಾ ಮನಸ್ಸಿನಲ್ಲಿ ವಿಕಾರ ಉಂಟು ಮಾಡಬಹುದಾದ್ದರಿಂದ, ಆ ವಿಕಾರಕ್ಕೆ ಸುಲಭವಾಗಿ ಒಳಗಾಗಬಹುದೆಂದು ತಾರ್ಕಿಕರು ಚಿಂತಿಸಿದರು. ಅದಕ್ಕಾಗಿ ಈ ರೀತಿಯ ನಿಬಂಧನೆಗಳನ್ನು ಹಾಕಿದರು. ಆದ್ದರಿಂದ ಮನೋವಿಕಾರಗಳಿಗೆ ಎಡೆಯಾಗುವ ಅಂತಹಾ ತಾಂತ್ರಿಕ ಪೂಜೆಗಳನ್ನು ಬಿಟ್ಟು, ತಾಯಿಯೆಂಬ ಗೌರವ ಭಾವದಿಂದ ಪೂಜಿಸುವುದಿದ್ದರೆ, ಯಾರಿಗೂ ಯಾವ ಪೂಜೆಗೂ ನಿಷೇಧವಿಲ್ಲ.
✍️ ದೇಹೋ ದೇವಾಲಯ ಪ್ರೋಕ್ತಾ, ದೇಹಕ್ಕೂ ದೇವಾಲಯಕ್ಕೂ ಸಂಬಂಧವನ್ನು ಕಲ್ಪಿಸಿ ತಾರ್ಕಿಕರು ಹೇಳುವರಲ್ಲಾ, ಅದರ ಸತ್ಯತೆ ಎಷ್ಟು
💐 ಮನುಷ್ಯ ದೇಹವು ಕೆಲವು ನಿರ್ದಿಷ್ಟ ಒಳಾಂಗ ರಚನೆಯಿಂದ ಕೂಡಿರುತ್ತದೆ. ಅದರಂತೆ ದೇವಾಲಯ ರಚನೆಯನ್ನು ಕೂಡಾ ಮಾನವ ದೇಹ ರಚನೆಯೊಂದಿಗೆ ಹೋಲಿಸಬಹುದು. ತಂತ್ರಶಾಸ್ತ್ರ ರೀತ್ಯಾ –
ಗರ್ಭಗೃಹವು ಶಿರೋ ಭಾಗವಾದರೆ,
ಸುಖನಾಸಿಯು ಹೃದಯ ಭಾಗವು,
ಪ್ರಸಾದ ಮಂಟಪವು ಉದರ ಭಾಗವು,
ಪ್ರಾಕಾರವು ಊರು ಭಾಗವು,
ಧ್ವಜಸ್ತಂಭ ಅಥವಾ ಪಾದಪೀಠವು ಪಾದ ಭಾಗವೂ ಆಗಿರುತ್ತದೆ.
ಅದರಂತೆ ಶಿರೋ ಭಾಗವಾದ ಗರ್ಭಗೃಹದಲ್ಲಿ ಜ್ಞಾನವು ಮತ್ತು ಹೃದಯಕ್ಕೆ ಸಮೀಪ ಪ್ರಾಪ್ತನಾದ ಭಕ್ತನಿಗೆ ದೇವರಲ್ಲಿರುವ ಜ್ಞಾನವು ಪ್ರಾಪ್ತವಾಗಲು ಸಾಧ್ಯ. ತೀರ್ಥ, ಪ್ರಸಾದಾಕಾಂಕ್ಷಿಗಳಾದ ಭಕ್ತರಿಗೆ ಭೋಗ ಭಾಗ್ಯಗಳು ಲಭಿಸುತ್ತದೆ. ಪಾದಾಕಾಂತನಾದ ಭಕ್ತನನ್ನು ಭಗವಂತನು ಎತ್ತಿ ಕೈಹಿಡಿದು ನಡೆಸುತ್ತಾನೆ ಎಂದರ್ಥ. ಉದಾಹರಣೆಗೆ ಕಾಳಹಸ್ತಿ ಚರಿತ್ರೆಯನ್ನು ಗಮನಿಸಿ.
✍️ ಲೋಹ ಪ್ರತಿಮೆಯು ಪ್ರತಿಷ್ಠಾರ್ಹವಲ್ಲವೆ?
💐 ಅತ್ಯುತ್ತಮವಾದ ಪ್ರತಿಷ್ಠಾರ್ಹ ಪ್ರತಿಮೆಯೆಂದರೆ ಶಿಲಾ ಪ್ರತಿಮೆಯೇ. ಅಲ್ಲದೆ ಕಾಷ್ಠ ಪ್ರತಿಮೆ, ಲೋಹ ಪ್ರತಿಮೆ, ಮೃತ್ತಿಕಾ ಪ್ರತಿಮೆ ಅಥವಾ ರಸಾಯನ ಪ್ರತಿಮೆಗಳು ಕೂಡಾ ಪ್ರತಿಷ್ಠಾರ್ಹತೆಯನ್ನು ಆಯಾ ಸಂದರ್ಭಗಳಲ್ಲಿ ಪಡೆಯುತ್ತದೆ. ಎಲ್ಲಾ ಕಡೆಗೂ ಲೋಹ ಪ್ರತಿಮೆಯು ಸೂಕ್ತವಾಗುವುದಿಲ್ಲ. ದೇವಾಲಯ ನಿರ್ಮಿಸಬೇಕಾದ ಸ್ಥಳ, ಅನಿವಾರ್ಯತೆ, ವಾಸ್ತು, ನಿರ್ಮಾಣಕಾರನ ಅರ್ಹತೆಗಳ ಮೇಲೆ ಹೊಂದಿ ಶಿಲಾಪ್ರತಿಮೆಯನ್ನುಳಿದು ಬೇರೆ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿರುವುದು ಕೆಲವು ಕಡೆ ಉದಾಹರಣೆಗಳಿವೆ. ಅದಕ್ಕೆ ಅಲ್ಲಿನದ್ದೇ ಆದ ಯಾವುದೋ ಒಂದು ಕಾರಣವಿದ್ದಿರುತ್ತದೆ ವಿನಃ ಸಾರ್ವತ್ರಿಕ ದೃಷ್ಟಿಯಲ್ಲಿ ಶಿಲಾಪ್ರತಿಮೆಯೇ ಅತ್ಯಂತ್ರ ಶ್ರೇಷ್ಠ. ಅದಕ್ಕೆ ಆಗಮಶಾಸ್ತ್ರ ರೀತ್ಯ ಕೂಡಾ ಪ್ರತಿಷ್ಠಾಪನಾಧಿಕಾರವಿರುತ್ತದೆ. ಲೋಹ ವಿಗ್ರಹವು ಚರ ಪ್ರತಿಷ್ಠೆಗೆ ಮಾತ್ರ ಬಳಸಲ್ಪಡುತ್ತದೆ.
ಅಲ್ಲದೇ ಇನ್ನೊಂದು ವಿಶೇಷ ಆಧ್ಯಾತ್ಮ ದೃಷ್ಟಿಯಿಂದ ನೋಡಿದಾಗ ಪ್ರಕೃತಿಯಲ್ಲಿ ಅತೀ ಜಡ ವಸ್ತುವಾದ ಶಿಲೆಯು ತಾಂತ್ರಿಕನೊಬ್ಬನಿಂದ ಚೇತನವನ್ನು ಪಡೆದು ಭಕ್ತಾದಿಗಳ ಕೋರಿಕೆ ಈಡೇರಿಸುವ ಶಕ್ತಿ ಹೊಂದುತ್ತದೆ ಎಂದಾದಾಗ, ಮಾನವನು ಈ ದೃಷ್ಟಾಂತವನ್ನೇ ಒರೆಗಲ್ಲಾಗಿ ಇಟ್ಟು, ತಾನು ಆಧ್ಯಾತ್ಮ ಮಾರ್‍ಗದಲ್ಲಿ ದೇವತ್ವಕ್ಕೆ ಏರಬಹುದು ಎನ್ನುವುದಕ್ಕೆ ನಿದರ್ಶನವಾಗಿರುತ್ತದೆ.
ಇನ್ನೂ ಒಂದು ವೈಜ್ಞಾನಿಕ ಕಾರಣವೂ ಶಿಲಾ ವಿಗ್ರಹವು ಶ್ರೇಷ್ಠ ಎಂಬುದಕ್ಕೆ ದೇವಾಲಯ ನಿರ್ಮಾಣ ಪೂರ್ವದಲ್ಲಿ ಉತ್ತಮವಾದ ಸ್ಥಳವನ್ನು ಹುಡುಕಿ ವಾಸ್ತು ಶಾಸ್ತ್ರಿಗಳಿಂದ ಸ್ಥಳ ಸಂಸ್ಕಾರ ಮಾಡುವ ಮುಖೇನ ಹಿಂದೆಹೇ ತಿಳಿಸಿದಂತೆ ಗರ್ಭಗೃಹದಿಂದ ಧ್ವಜಸ್ತಂಭದವರೆಗಿನ ಮಣ್ಣನ್ನು ಅಗೆದು ಶುದ್ಧ ಪಡಿಸಿ, ಧ್ವಜಸ್ತಂಭದಲ್ಲಿ ಆಕರ್ಷಿಸಲ್ಪಟ್ಟು ವಿದ್ಯುತ್ಕಾಂತೀಯ ಕಣಗಳು ಭೂಗತವಾಗುವ (Earthing) ಅಥವಾ ಭೂಸ್ಥಾಪನಾ ವ್ಯವಸ್ಥೆಗಾಗಿ ಧ್ವಜಸ್ತಂಭದಿಂದ ಸಂಪರ್ಕ ಪಡೆದು ಗರ್ಭಗೃಹದ ೧೬ ಅಡಿ ಆಳದಲ್ಲಿ ಲೋಹ ನಿಕ್ಷೇಪ ಮಾಡುವ ಪದ್ಧತಿ ಬಳಕೆಯಲ್ಲಿದೆ. ಅಲ್ಲಿಂದಲೇ ಪೀಠಾವರಣ ದೇವತೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಅದಕ್ಕೆ ಪಾತಾಳಬಂಧವೆನ್ನುತ್ತಾರೆ. ಅದನ್ನೇ ಕೂರ್ಮ, ಅನಂತ, ದಿಗ್ಗಜ ಎಂಬ ಮೂರು ಸ್ತರವನ್ನು ಹೇಳುತ್ತಾರೆ. ಅದರ ಮೇಲೆ ಮೂಲ ಪೀಠವನ್ನು ಇಟ್ಟು ದೇವತಾ ಪ್ರತಿಮೆಯನ್ನು ಸ್ಥಾಪಿಸುವುದು ಪದ್ಧತಿ. ಆಗ ಸ್ಥಾಪಿಸಲ್ಪಡುವ ವಿಗ್ರಹವು ಲೋಹದ್ದಾದರೆ ಕೆಳಕ್ಕೆ ಹರಿಯಬೇಕಾದ ವಿದ್ಯುತ್ ಕಣಗಳು ವಿಗ್ರಹದ ಕಡೆಗೆ ಹರಿದು, ಅರ್ಚಕನಿಗೆ ಆಘಾತ ಉಂಟುಮಾಡುವುದು ಎಂಬುದು ವೈಜ್ಞಾನಿಕ ಅಭಿಪ್ರಾಯ ಮತ್ತು ವಾಸ್ತುಶಾಸ್ತ್ರೀಯ ಮತ.
ಮುಂದುವರಿಯಲಿದೆ.......
No comments:
Post a Comment