✍️ಎಲ್ಲವನ್ನೂ ಮರೆತು ಏಕಾಗ್ರತೆಯಿಂದ ಹೋಗುವ ದೇವಾಲಯದ ಪ್ರವೇಶ ದ್ವಾರದಲ್ಲೇ ಮಿಥುನ ಶಿಲ್ಪ ಹಾಗೂ ರಾಕ್ಷಸ ಶಿಲ್ಪದ ಅವಶ್ಯಕತೆ ಏನು?
💐ದೇವಾಲಯ ರಚನಾ ವಿಧಾನ ನಿಯಮದಂತೆ ಪ್ರಸ್ತುತವಾದಂತಹ ಶಿಲ್ಪಗಳು,
ಇನ್ನೊಂದು ಅಲಂಕಾರಿಕ ಶಿಲ್ಪಗಳು,
ಇನ್ನೊಂದು ಬೋಧಕ ಶಿಲ್ಪಗಳು
ಎಂಬ ಮೂರು ವಿಧದ ಶಿಲ್ಪಗಳನ್ನು ದೇವಾಲಯಗಳಲ್ಲಿ ಅಳವಡಿಸಿರುತ್ತಾರೆ. ಬೋಧಕ ಶಿಲ್ಪಗಳಲ್ಲಿ, ಆ ದೇವಾಲಯ ಕಟ್ಟಿದ ರಾಜನ ಅಥವಾ ಆ ಪುಣ್ಯಾತ್ಮನ ಜೀವನ ಚರಿತ್ರೆಯ ವಿಚಾರ ಇರಬಹುದು, ಯುದ್ಧ-ಹೋರಾಟಗಳ ದೃಶ್ಯಾವಳಿಗಳು ಇರಬಹುದು, ರಾಮಾಯಣ, ಮಹಾಭಾರತ, ಭಾಗವತಾದಿ ಕಥಾವಳಿಗಳ ಚಿತ್ರವಿರಬಹುದು ಅಥವಾ ರಾಕ್ಷಸ, ಮಿಥುನ ಶಿಲ್ಪಗಳಿರಬಹುದು. ಅವು ಕೇವಲ ಬೋಧನಾ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿರುವವೇ ವಿನಃ ಬೇರೆ ಯಾವ ಉದ್ದೇಶದಿಂದಲೂ ಅಲ್ಲ. ದೇವಾಲಯಕ್ಕೆ ಬರುವ ಭಕ್ತನು ಹೊರ ಪ್ರಾಕಾರದಲ್ಲಿಯೇ ಕಾಣಬರುವ ಈ ಕೆತ್ತನೆಗಳನ್ನು ಗಮನಿಸಿ ತನ್ನಲ್ಲಿರುವ ರಾಕ್ಷಸೀ ಪ್ರವೃತ್ತಿಯನ್ನು ಬಿಟ್ಟು, ಭೋಗಲಾಲಸೆಯ, ಆಸೆ, ಆಕಾಂಕ್ಷೆಗಳನ್ನು ತ್ಯಜಿಸಿ ರಾಮಾಯಣ, ಮಹಾಭಾರತದ ದೃಶ್ಯಾವಳಿಗಳನ್ನು ನೋಡಿ, ಅಲ್ಲಿ ಮಹಾಪುರುಷರ ಆದರ್ಶಗಳನ್ನು ಅರ್ಥೈಸಿಕೊಂಡು ದೇವಾಲಯಗಳ ಪ್ರಾಕಾರ ಸುಖನಾಸಿ ಅಥವಾ ದೇವತಾ ಹೃದಯ ಸಮೀಪ ಆತ್ಮೀಯನಾದಲ್ಲಿ ನಿನಗೆ ದೇವತಾ ದರ್ಶನವಾಗುತ್ತದೆ ಎಂದು ಸಾರುವುದೇ ಈ ಶಿಲ್ಪಗಳ ಉದ್ದೇಶವಾಗಿರುತ್ತದೆ ಮತ್ತು ಕೆಲವು ದೃಷ್ಟಿ ಬೊಂಬೆಗಳು ಎನ್ನುವ ಉದ್ದೇಶದಿಂದಲೂ ಸ್ಥಾಪಿಸಲ್ಪಡುತ್ತದೆ. ಹಾಗಾಗಿ ಶಿಲ್ಪಗಳ ವಸ್ತುಗಳನ್ನರಿತು ಅರ್ಥೈಸಿಕೊಳ್ಳಿ ಎನ್ನುತ್ತಾ ಈ ಶಿಲ್ಪ ಪ್ರಶ್ನೆಗಳಿಗೆ ವಿವರಿಸಿದರು.
✍️ದೇವರು ವರ ಕೊಟ್ಟರೂ ಪೂಜಾರಿ ಕೊಡ! ಎಂಬ ಅಪಖ್ಯಾತಿ ಏಕೆ ಬಂತು? ಗಾದೆಯು ವೇದಕ್ಕೆ ಸಮಾನವೆಂಬ ನಾಣ್ನುಡಿ ಇರುವಾಗ ನಿಜವಾಗಿಯೂ ಅರ್ಚಕ ವರ್ಗದಲ್ಲಿ ಏನಾದರೂ ತಪ್ಪಿರಬಹುದೇ?
💐ದೇವಾಲಯ ಎಂದರೆ ಏನು? ಎಂಬುದರ ಸ್ಪಷ್ಟ ಚಿತ್ರಣವನ್ನು ಮೊದಲನೆಯದಾಗಿ ಮಾಡಿಕೊಳ್ಳಬೇಕು. ದೇವಾಲಯ ಎಂದಾಗ ಯಾವುದೇ ಒಂದು ದೇವತಾತ್ಮಕವಾದಾಗ ಬಿಂಬರೂಪವಾಗಿಯಾಗಲಿ, ಮೂರ್ತಿರೂಪವಾಗಿಯಾಗಲಿ ಪ್ರತಿಷ್ಠಾಪಿಸಲ್ಪಡುತ್ತದೆ. ಆ ಪ್ರತಿಷ್ಠಾಪನಾ ವಿಧಿಯನ್ನು ತಿಳಿದುಕೊಂಡಾಗ ದೇವಾಲಯ ಎಂಬುದರ ಸ್ಪಷ್ಟ ಚಿತ್ರಣ ಅರಿವಾಗುತ್ತದೆ. ಯಾವುದೇ ಒಂದು ಕಡೆಯಲ್ಲಿ ದೇವತಾ ಪ್ರತಿಷ್ಠಾಪನೆ ಮಾಡಬೇಕಾದಾಗ, ಮುಖ್ಯವಾಗಿ ಆಗಮ ಶಾಸ್ತ್ರ ರೀತ್ಯಾ, ನಿರ್ದಿಷ್ಟ ವಾಸ್ತು ರಚನೆಯಂತೆ ಗರ್ಭಗೃಹ ನಿರ್ಮಾಣ ಮಾಡುತ್ತಾರೆ. ಹಿಂದೆ ತಿಳಿಸಿದಂತೆ ಅದಕ್ಕೆ ಬೇಕಾದ ೩ ಸ್ತರದ ಸಂಬಂಧವನ್ನು ಕಲ್ಪಿಸಿ, ಪಾಣಿಪೀಠವನ್ನು ಸ್ಥಾಪಿಸಿ, ನವರತ್ನಾದಿಗಳ ಸ್ಥಾಪನಾಪೂರ್ವಕ ಪೀಠಾವರಣ ದೇವತಾ ಶಕ್ತಿಗಳೊಂದಿಗೆ ಪ್ರಕೃತಿಯಲ್ಲಿರತಕ್ಕ ಪಂಚತ್ರಯ ಶಕ್ತಿಗಳನ್ನು ಹೊಂದಿಸಿ ಪಾಣಿಪೀಠವನ್ನು ಸ್ಥಾಪಿಸುತ್ತಾರೆ. ಅಲ್ಲಿಂದ ಮುಂದೆ ಉದ್ದೇಶಿತ ಮೂರ್ತಿಯ ಪ್ರತಿಷ್ಠಾಪನಾ ವಿಧಾನದಂತೆ ಮೂರ್ತಿಗೆ ಬೇಕಾದ ಸಂಸ್ಕಾರಗಳನ್ನು ಕೊಟ್ಟು ಅಧಿವಾಸಾದಿಗಳಿಂದ ಪರಿಷ್ಕರಿಸಿ ದೇವತಾ ಮೂರ್ತಿಯನ್ನು ಪೀಠದಲ್ಲಿ ಸ್ಥಾಪಿಸಿ, ಅಷ್ಟಬಂಧ ಪೂರ್ವಕ ಉದ್ದೇಶಿತ ದೇವತೆಯನ್ನು ಪೀಠಾವರಣ ದೇವತಾ ಸಂಪರ್ಕಕ್ಕೆ ಕೊಡುವುದೇ ಆಗಿರುತ್ತದೆ. ಪೀಠಭಾಗದಲ್ಲಿ ಸ್ಥಾಪಿಸಲ್ಪಟ್ಟ ಪಂಚತ್ರಯಗಳು = ೧೫, ಅಷ್ಟತ್ರಯಗಳು = ೨೪, ಯೋಗಿನಿಗಳು = ೬೪, ತತ್ವಗಳು = ೧೮, ಗುಣಗಳು = ೬, ಪ್ರಕೃತಿ = ೧. ಈ ರೀತಿಯ ದೇವತಾ ಸಂಬಂಧವನ್ನು ಏರ್ಪಡಿಸುವ ಮುಖೇನ ಧನಾತ್ಮಕ (positive) ಎಂದು ಹೇಳುವ ಧನಾಂಶ ಶಕ್ತಿಯೊಂದು ಉತ್ಪಾದಿಸಲ್ಪಟ್ಟಿರುತ್ತದೆ. ಅದನ್ನು ಸಂಗ್ರಾಹಕ (capacitor) ಎಂದು ಗುರುತಿಸಬಹುದು. ದೇವತಾ ವಿಗ್ರಹದಲ್ಲಿ ಸ್ಥಾಪಿಸಲ್ಪಡುವ ಷೋಡಶ ಅಮೃತ ಕಲೆಗಳು, ದ್ವಾದಶ ಸೌರಕಲೆಗಳು, ದಶ ಅಗ್ನಿಕಲೆಗಳು, ಜೀವ ಮತ್ತು ಆತ್ಮ ಎಂಬ ಎರಡು ಕಲೆಗಳು ಸೇರಿ ಚತ್ವಾರೀಂ ಕಲಾ ಪೂರೈಕೆಯೊಂದಿಗೆ ಋಣಾಂಶ (negative) ಶಕ್ತಿಯೊಂದು ಉದ್ಭವಿಸುತ್ತದೆ. ಇವೆರಡರ ಸಂಬಂಧ ಕಲ್ಪಿಸುವುದೇ ಅಷ್ಟಬಂಧವೆಂಬ ೮ ಮಂತ್ರಗಳು. ಚಾಲ್ತಿಯಲ್ಲಿರುವ ಪ್ರತಿಮೆ ಮತ್ತು ಪೀಠಕ್ಕೆ ಬಿಗಿಗಾಗಿ ತುಂಬುವ ಯಾವುದೇ ರೀತಿಯ ಅಂಟು ವಸ್ತುವು ಅಷ್ಟಬಂಧವಲ್ಲ, ಆ ೮ ಮಂತ್ರಗಳೇ ಅಷ್ಟಬಂಧಗಳು. ಅವುಗಳ ಮುಖೇನ ದೇವತಾ ಸ್ಥಾಪನೆಯಾದಾಗ ಅಲ್ಲಿ ಪ್ರತಿಷ್ಠಾಪಿಸಲ್ಪಟ್ಟ ದೇವತಾತ್ಮಕವಾದ ಧನ ಋಣಾಂಶ ಶಕ್ತಿಗಳು ಒಂದಿ ರೀತಿಯ ಅವೇದ್ಯವಾದ ಕಾಂತಕ್ಷೇತ್ರವನ್ನು ಉಂಟುಮಾಡಿಕೊಳ್ಳುತ್ತದೆ. ದೇವಾಲಯಕ್ಕೆ ಬಂದ ಭಕ್ತನೊಬ್ಬನು ಸಶಕ್ತನಾಗಿದ್ದು, ಸತ್ಪುರುಷನಾಗಿದ್ದಲ್ಲಿ, ಆತನು ದೇವರಿಗೆ ನಮಿಸಿದಾಗ ಆತನಲ್ಲಿ ಇರತಕ್ಕಂತಹಾ ಸದ್ಭಾವವೆಂಬ ಶಕ್ತಿಯನ್ನು ಈ ಪ್ರತಿಮೆಯು ಸ್ವೀಕರಿಸಿ ತನ್ನಲ್ಲಿ ಶೇಖರಿಸಿ ಇಟ್ಟುಕೊಳ್ಳುತ್ತದೆ. ಹಾಗೆಯೇ ಸಾವಿರಾರು ಜನ ಭಕ್ತರು ಬಂದಾಗ ಅವರಲ್ಲಿ ಇರತಕ್ಕಂತಹಾ ಸತ್ಶಕ್ತಿಯಲ್ಲಿ ಒಂದೊಂದನ್ನು ಸ್ವೀಕರಿಸಿ ಈ ದೇವಾಂಶವು ವೃದ್ಧಿಯಾಗುತ್ತದೆ.
ಪ್ರತಿಷ್ಠಾಪಕನು ಪ್ರತಿಷ್ಠಾ ಕಾಲದಲ್ಲಿ ದೇವಾಲಯದಲ್ಲಿ ದೇವತಾ ಮೂರ್ತಿ ಸ್ವರೂಪವಾದ ಈ ಒಂದು ಸತ್ಶಕ್ತಿಯನ್ನು ಸ್ಥಾಪಿಸಬಲ್ಲ. ಮುಂದೆ ಅದು ವೃದ್ಧಿಯಾಗುತ್ತಾ ಹೋಗುವುದು ಅರ್ಚಕ ಮತ್ತು ಭಕ್ತಾದಿಗಳಿಂದಲೇ ವಿನಃ ಸ್ಥಾಪಕನಿಂದಲ್ಲ. ಸ್ಥಾಪಕನು ಮೂಲ ಧನ ಮಾತ್ರ. ಈ ಸದ್ಭಾವದಿಂದ ಸ್ಥಾಪಿಸಲ್ಪಟ್ಟ ಶಕ್ತಿಯು ಆರ್ತನಾದ ಕಷ್ಟದಲ್ಲಿರತಕ್ಕ ಭಕ್ತನೊಬ್ಬನ ಬೇಡಿಕೆ ಪ್ರಾಮಾಣಿಕವಾಗಿದ್ದಲ್ಲಿ, ನ್ಯಾಯಸಮ್ಮತವಾಗಿದ್ದಲ್ಲಿ, ತನ್ನಲ್ಲಿ ಸಂಗ್ರಹಿಸಲ್ಪಟ್ಟ ಶಕ್ತಿ ಪ್ರಭಾವ ಮತ್ತು ಶಕ್ತಿಯ ಅಂಶದಿಂದ ಒಂದು ಭಾಗವನ್ನು ಭಕ್ತನಿಗೆ ಕೊಟ್ಟು ಅವನ ಅಭಿವೃದ್ಧಿಗೆ ಅದು ಸಹಕರಿಸುತ್ತದೆ. ಹೀಗೆ ದೇವಾಲಯಗಳ ಕಲ್ಪನೆ ಇರುತ್ತದೆ.
ಆಗ ದೇವಾಲಯಗಳಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶ ಏನೆಂದರೆ, ದೇವರಿಗೂ ಭಕ್ತರಿಗೂ ಸಂಬಂಧ ಸೇತುವಾದ ವ್ಯಕ್ತಿಯಾದ ಅರ್ಚಕನು ಪ್ರಧಾನತ್ವವನ್ನು ಹೊಂದುತ್ತಾನೆ. ಆ ಅರ್ಚಕನು ತನ್ನದಾದಂತಹಾ ವೈಯಕ್ತಿಕ ಜವಾಬ್ದಾರಿಗಳನ್ನು ಅರಿತು, ಬರುವ ಭಕ್ತಾದಿಗಳಲ್ಲಿ ಸಾತ್ವಿಕ ಭಾವನೆಗಳ ಜೊತೆಯಲ್ಲಿ ಸದ್ಭಕ್ತಿಯೂ ಹುಟ್ಟುವಂತೆ ಪ್ರೇರೇಪಿಸಬೇಕು. ಅಲ್ಲದೆ ಕೇಳಿಕೆಗಳು ಪ್ರಾಮಾಣಿಕವಾಗಿಯೂ ಅವನ ಅಗತ್ಯತೆಗೆ ತಕ್ಕಂತೆಯೂ ಅರ್ಹವಾಗಿರಬೇಕು. ಒಬ್ಬ ಭಕ್ತನ ಬೇಡಿಕೆಯನ್ನು ಪೂರೈಸುವ ಜೊತೆಯಲ್ಲಿ ಇನ್ನೊಬ್ಬನಿಗೆ ಹಿಂಸೆಯಾಗುವಂತಿರಬಾರದು. ಆಗ ಮಾತ್ರ ಅಲ್ಲಿ ಸ್ಥಾಪಿಸಲ್ಪಟ್ಟ ಶಕ್ತಿಯು ಆ ಭಕ್ತನ ಬೇಡಿಕೆಯನ್ನು ಪೂರೈಸಲು ಸಾಧ್ಯ. ಹಾಗಾಗಿ ಅರ್ಚಕನು ದೇವತಾ ಶಕ್ತಿಯ ಸತ್ಯ ಕಲ್ಪನೆಯನ್ನು ಭಕ್ತನಿಗೆ ಅವನ ಅರ್ಹತೆಯು ಅವನಿಗೆ ಅರಿವಾಗುವಂತೆ ಮಾಡುವುದಕ್ಕೆ ಅರ್ಚಕನು ಭಾಧ್ಯಸ್ಥನಾಗಿರುತ್ತಾನೆ. ಅಲ್ಲದೆ ಅರ್ಚಕನು ಕೇವಲ ಮಧ್ಯವರ್ತಿಯಾಗಿರಬೇಕೇ ವಿನಃ ದೇವರು ಮತ್ತು ಭಕ್ತರ ಮಧ್ಯದ ದಲ್ಲಾಳಿಯಾಗಿರಬಾರದು. ಆಗ ಮಾತ್ರ ಭಕ್ತರ ಅಪೇಕ್ಷೆಯು ನೆರವೇರಲು ಸಾಧ್ಯ. ಪ್ರಸಕ್ತ ಕಾಲದಲ್ಲಿ ಹೆಚ್ಚಿನದೇವಾಲಯಗಳಲ್ಲಿ ಭಕ್ತರು ಮತ್ತು ದೇವರ ಮಧ್ಯೆ ಅರ್ಚಕನು ಮಾರ್ಗದರ್ಶಕನಾಗದೆ ದಲ್ಲಾಳಿಯ ಪಾತ್ರವಹಿಸಿದ್ದನ್ನು ಕಂಡ, ಅದರಿಂದ ನೊಂದ ಯಾರೊಬ್ಬ ಭಕ್ತನ ಸಾತ್ವಿಕ ಉದ್ಘಾರವೇ “ದೇವರು ಕೊಟ್ಟರೂ ಪೂಜಾರಿ ಕೊಡ” ಎಂದಾಗಿರುತ್ತದೆ.
ಆದ್ದರಿಂದ ಅರ್ಚಕರಾಗಿ ದೇವಾಲಯದಲ್ಲಿ ಇರುವ ಅರ್ಚಕ ವರ್ಗಕ್ಕೆ ತಿಳಿಸುವುದೇನೆಂದರ್ ನೀವಿದನ್ನು ವೃತ್ತಿಯಾಗಿ ಸ್ವೀಕರಿಸಬೇಡಿ, ಸೇವಾ ಮನೋಭಾವದಿಂದ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಿಸಿ, ಶಮದಮಾದಿಗಳನ್ನು ಮೈಗೂಡಿಸಿಕೊಂಡು, ಷಡ್ವೈರಿಗಳನ್ನು ದೂರೀಕರಿಸುವ ಮುಖೇನ ದೇವ ಭಕ್ತರ ಮಧ್ಯದ ಸೇತುವಾಗಿ. ಹಿಂದಿನ ದಾರ್ಶನಿಕರೆಲ್ಲಾ ಹಾಗಾಗಿಯೇ ಕೀರ್ತಿಶಾಲಿಯಾದರೇ ವಿನಃ ಜೀವನ ನಿರ್ವಹಣೆಗೆ ಬೇಕಾಗಿ ದೇವರ ಪದ ಬಳಸಿದ ದಾರ್ಶನಿಕರಲ್ಲ. ಆಸೆಯೆಂಬ ಕುದುರೆಯು ಬೆನ್ನೇರಿದ ಯಾವ ಮನುಷ್ಯನೂ ಕೊನೆಯನ್ನು ಕಾಣಲಾರ. ಆದ್ದರಿಂದ ಅತಿ ಆಸೆಯನ್ನು ಬಿಟ್ಟು ಪ್ರಾಪ್ತವನ್ನು ಮಾತ್ರ ಜೀವನಕ್ಕೆ ಹೊಂದಿಸಿಕೊಂಡು ಬದುಕುವ ಇರಾದೆಯನ್ನು ಹೊಂದಿದವನು ಮಾತ್ರ ಅರ್ಚಕನಾದರೆ ಈಗ ಬಂದಿರತಕ್ಕ ಅಪವಾದವು ಕಾಲಕ್ರಮೇಣ ಅಳಿಸಿ ಹೋಗುತ್ತದೆ. ಇಲ್ಲವಾದಲ್ಲಿ ಇದನ್ನು ಅಪವಾದವೆಂದು ಪರಿಗಣಿಸದೆ ಸತ್ಯವೆಂದು ಒಪ್ಪಿಕೊಳ್ಳಬೇಕಾಗುತ್ತದೆ.
No comments:
Post a Comment