ಶ್ರೀ ಚಕ್ರ, ಶ್ರೀ ವಿಧ್ಯೆ
ಪ್ರಸಕ್ತ ಕಾಲದಲ್ಲಿ ಶ್ರೀ ವಿಧ್ಯಾ ಎಂದರೆ ಒಂದು ಶಕ್ತಿ ದೇವತೆಯ ಉಪಾಸನೆ ಎಂದು ಅರ್ಥೈಸಿದ್ದಾರೆ. ಅಲ್ಲದೆ ಅದಕ್ಕೆ ಒಂದು ಯಂತ್ರ ಸ್ವರೂಪ ಕೊಟ್ಟಿದ್ದಾರೆ ಮತ್ತು ಅದರ ಅಧಿದೇವತೆ ಲಲಿತೆಯೆಂದು ಸಾರಿದ್ದಾರೆ.
ಇದರಲ್ಲಿ ಎಷ್ಟು ಸತ್ಯವಿದೆ?
ಈ ವಿಧ್ಯೆ ನಿಜವಾದ ಅಷ್ಟಾಂಗ ಯೋಗಯುಕ್ತವಾದ ಶ್ರೀವಿಧ್ಯೆಯೇ?
ಅಥವಾ ಷಟ್ಚಕ್ರಾಧಾರಿತ ಚಕ್ರವಿಧ್ಯೆಯೇ?
ಲಲಿತೆ ಯಾರು?
ಅದರ ಸ್ವರೂಪ ಏನು?
ಪ್ರಕಟಿತ ಗ್ರಂಥಗಳು ಏನು ಹೇಳುತ್ತವೆ?
ಅವು ವೇದಮಾನ್ಯವೇ ಅಥವಾ ಕಲ್ಪಿತವೇ?
ಇದು ಮೋಕ್ಷ ಸಾಧನ ಹೌದೇ?
ಈ ರೀತಿಯ ಕೋನ ರೂಪದ ಯಂತ್ರವು ಅಷ್ಟೈಶ್ವರ್ಯ ಸಾಧಕವಾಗಲು ಸಾಧ್ಯವೇ?
ಭೋಗವು, ಮೋಕ್ಷವು ಏಕ ಎಂದು ಹೇಳುವ ಈ ಸೂತ್ರಕಾರರು ಜನರನ್ನು ವಂಚಿಸುತ್ತಿದ್ದಾರೆಯೇ?
ಈ ವಿಚಾರವಾಗಿ ಚಿಂತಿಸೋಣ. ಮುಖ್ಯವಾಗಿ ಪ್ರಚಲಿತವಿರುವ ಶ್ರೀಚಕ್ರ, ಇದರ ಸ್ವರೂಪ ಈ ರೀತಿ ಇದೆ:-
|| ಬಿಂದು ತ್ರಿಕೋಣ ವಸುಕೋಣ ದಶಾರಯುಗ್ಮಂ
ಅನ್ವಶ್ಚ ನಾಗದಲ ಸಂಯುತ ಷೋಡಶಾರಂ ||
ಹೀಗೆ ರಚನಾ ಸೂತ್ರದಂತೆ ಶ್ರೀಯಂತ್ರ ಎಂದು ಹೇಳುತ್ತಾರೆ. ಇದು ಯಾವ ಯಂತ್ರ? ಮಂತ್ರ ಮಹಾರ್ಣವ, ಮಂತ್ರ ಮಹೋದಧಿ, ಶಾಕ್ತಪ್ರಮೋದ, ಪ್ರಪಂಚಸಾರ, ಯಂತ್ರ ಮಾತೃಕಾ, ತಾಂತ್ರಿಕಾಖ್ಯಾಯಿಕಾ, ಲಕ್ಷಣಸಂಹಿತಾ, ತಂತ್ರ ಸೂತ್ರ ದರ್ಶನ, ಯೋಗ ಪ್ರದೀಪ ಇತ್ಯಾದಿ ಗ್ರಂಥಗಳಲ್ಲೂ ಕೆಲವು ಶ್ರೀಚಕ್ರ ಎಂದು ಹೇಳುವ ಯಂತ್ರದ ಬಗ್ಗೆ ವಿವರಣೆ ಇದೆ. ಅಲ್ಲೆಲ್ಲಾ ಪರಸ್ಪರ ವಿರುದ್ಧಾತ್ಮಕವಾದ ಯಂತ್ರಸ್ವರೂಪ ಕಂಡು ಬರುತ್ತದೆ. ಈ ರೀತಿಯ ಅಭಿಪ್ರಾಯ ಭೇದಗಳಿಗೆ ಕಾರಣವೇನು? ಎಂದು ಚಿಂತಿಸುವುದು ತಪ್ಪೇ? ಹಾಗೆ ಮೇಲೆ ಉದಾಹರಿಸಿದ ಅಲ್ಲದೇ ಇನ್ನೂ ಹಲವಾರು ಗ್ರಂಥಗಳಲ್ಲಿ ಕೂಡ ಈ ವಿಚಾರ ಉಲ್ಲೇಖವಿದೆ. ಈ ಗ್ರಂಥಗಳ ಬಗ್ಗೆ ಅನುಮಾನ ಪಡಬೇಕು, ಏಕೆಂದರೆ ಒಂದಕ್ಕೊಂದು ವಿರುದ್ಧವಾದ ಅಭಿಪ್ರಾಯ ಮಂಡಿಸುವ ಈ ಗ್ರಂಥಗಳ ಉದ್ದೇಶವೇನು? ಆಶ್ಚರ್ಯವಾಗುತ್ತಿದೆ ಅಲ್ಲವೇ? ಖಂಡಿತಾ ಹೌದು. ಆ ಗ್ರಂಥಗಳೂ ಕೂಡ ಅನ್ವೇಷಕಗಳೇ. ಅವುಗಳಿಗೂ ಕೂಡ ಪೂರ್ಣ ವಿವರ ಸಿಗದ ಅಪೂರ್ಣ ಗ್ರಂಥಗಳು; ಅವು ದಾರಿ ತಪ್ಪಿಸಿವೆ. ಇದಕ್ಕೆ ಹಿನ್ನೆಲೆಯಾದ ಈ ಪ್ರಚಲಿತವಿರುವ ಈ ಯಂತ್ರ ಯಾವುದು? ಇದರ ಹಿನ್ನೆಲೆ ಏನು? ಇದರಲ್ಲಿ ಆರೋಪಿಸಿದ ದೇವತೆಯ ಸತ್ಯತೆ ಏನು? ಈ ಬಗ್ಗೆ ತಿಳಿಯುವ ಕುತೂಹಲ ಸಹಜವಲ್ಲವೇ? ಕುತೂಹಲ ಅಪರಾಧವಲ್ಲ. ಹಾಗೇ, ಲಭ್ಯ ಗ್ರಂಥಗಳಿಂದ ಸಿಕ್ಕ ಆಧಾರಗಳನ್ನೇ ಕ್ರೋಢೀಕರಿಸಿದಲ್ಲಿ, ಅವುಗಳಲ್ಲಿ ಅಲ್ಲಲ್ಲಿ ಸಿಗುವ ಕೆಲ ವಿಚಾರಗಳನ್ನು ಅಂದರೆ ಒಂದಕ್ಕೊಂದು ಪೂರಕ ವಿಚಾರವನ್ನು ಮಾತ್ರ ಸಂಗ್ರಹಿಸಿದಲ್ಲಿ ಆಗ ನಿಮಗೆ ಅರ್ಥವಾಗುತ್ತದೆ.
ಉದಾಹರಣೆಗೆ ಯಂತ್ರ ಮತ್ತು ತಂತ್ರ ಶಾಸ್ತ್ರ ವಿಚಾರ ತೆಗೆದುಕೊಳ್ಳಿ. ಈ ವಿಚಾರವಾಗಿ ಸಮಗ್ರ ಪರಿಚಯ ಇಲ್ಲಿ ಸಾಧ್ಯವಿಲ್ಲ. ಆದರೆ ಸ್ಥೂಲ ಪರಿಚಯ ಮಾಡಿಕೊಡುತ್ತೇನೆ. ಮಂತ್ರವೊಂದರ ಸಾಮರ್ಥ್ಯವನ್ನು ಕಾರ್ಯ ರೂಪಕ್ಕೆ ತರಲು ಯಂತ್ರ ಬೇಕು. ಅದೊಂದು ಸಾಧನ ಮಾತ್ರವಷ್ಟೆ. ಅದನ್ನು ಹೇಗೆ ತರಲು ಸಾಧ್ಯವೆಂದು ಹೇಳುವುದು ತಂತ್ರ. ಆದ್ದರಿಂದ ಮಂತ್ರ ಯಂತ್ರಗಳ ಕೊಂಡಿ ತಂತ್ರವಾಯ್ತು. ಹಾಗಿದ್ದಾಗ ಎರಡೂ ಕಡೆಯ ಹೊಂದಾಣಿಕೆ ಸಹಕಾರಿಯಾದ ಸೂತ್ರವನ್ನು ರೂಪಿಸಿರುವುದೇ ತಂತ್ರ. ತಂತ್ರಕ್ಕೆ ಅದರದ್ದೇ ಆದ ಒಂದು ಸೂತ್ರ ನಿಯಮವಿದೆ. ಆ ಸೂತ್ರ ಹೊರತು ಪಡಿಸಿದ ತಂತ್ರವಿಲ್ಲ.
ಉದಾಹರಣೆ ೧:- ಸೂತ್ರ ನಿಯಮ ಪ್ರಕಾರ ದೋಣಿ: ಇದು ನೀರಿನಲ್ಲಿ ತಾನು ತೇಲುವುದಲ್ಲದೆ ತನ್ನ ಶಕ್ತಿಗೆ ಹೊಂದಿಕೊಂಡು ಕೆಲ ತೂಕದ ಸಾಮಗ್ರಿಗಳನ್ನೂ ನೀರಿನಲ್ಲಿ ತೇಲಿಕೊಂಡು ಸಾಗಿಸಬಲ್ಲದು. ಆದರೆ ದೋಣಿ ತಯಾರಿಕೆಯ ನಿಯಮ ವಿರುದ್ಧವಾಗಿ ತಯಾರಿಸಿದಲ್ಲಿ ತಾನೂ ಮುಳುಗುತ್ತದೆ, ಹೇರನ್ನೂ ಮುಳುಗಿಸುತ್ತದೆ. ಆದ್ದರಿಂದ ತಂತ್ರ ಬದ್ಧವಾದ ದೋಣಿ ತಯಾರಿಕಾ ವಿಧಾನದಂತೆ ದೋಣಿ ತಯಾರಿಸಿದಲ್ಲಿ ಮಾತ್ರ ಯಾನಕ್ಕೆ ಅರ್ಹವಾಗುತ್ತದೆ ಮತ್ತು ಅದು ಯಂತ್ರವೆಂಬ ಹೆಸರು ಪಡೆಯುತ್ತದೆ. ಇಲ್ಲವಾದಲ್ಲಿ ಅದು ಉಪಯೋಗಕ್ಕೆ ಬರಲಿಕ್ಕಿಲ್ಲ. ಕಾಗದದಿಂದಲೋ ಅಥವಾ ನೀರಿನಲ್ಲಿ ನೆನೆಯುವ ಅಥವಾ ಮುಳುಗುವ ವಸ್ತುಗಳಿಂದಲೋ ದೋಣಿ ತಯಾರಿಸಲು ಸಾಧ್ಯವೇ? ತಯಾರಿಸಿದರೂ ಉಪಯುಕ್ತವೇ? ಖಂಡಿತಾ ಇಲ್ಲ. ಆಗ ತಂತ್ರ ಶಾಸ್ತ್ರ ನಿರ್ಬಂಧಿಸುತ್ತದೆ; ಅದು ಸರಿಯಲ್ಲವೆಂದು ಹೇಳುತ್ತದೆ.
ಉದಾಹರಣೆ ೨:- ಹಾಗೆಯೇ ಭೂಚರಿ ಯಂತ್ರ - ಕಾರು ಎಂದಿಟ್ಟುಕೊಳ್ಳಿ. ಅದಕ್ಕೆ ಚಲನೆಗೆ ಚಕ್ರವೇ ಪ್ರಧಾನ. ಚಕ್ರಕ್ಕೆ ಶಕ್ತಿಯು ಪೂರಕವಾದರೆ ಉರುಳುತ್ತದೆ. ಇದು ತಂತ್ರಶಾಸ್ತ್ರದ ರೀತಿಯ ಸುಲಭ ಯಂತ್ರ ವಿಧಾನ. ಹಾಗೆಂದು ಈ ವಿಧಾನ ಬಿಟ್ಟು ಬೇರೆ ಏನೋ ರೀತಿಯಲ್ಲಿ ಯಂತ್ರ ರೂಪಿಸಿದಲ್ಲಿ ಅದು ಚಲಿಸಲು ಸಾಧ್ಯವೇ? ಆಲೋಚಿಸಿ.
ಉದಾಹರಣೆ ೩:- ಆಕಾಶದಲ್ಲಿ ಹಾರುವುದಕ್ಕೆ ಅದರದ್ದೇ ಆದ ನಿಯಮವಿರಬೇಕು. ಗಾಳಿಯ ಒತ್ತಡವು ತೂಕದ ಪ್ರಮಾಣಕ್ಕಿಂತ; ಅಂದರೆ ಆಧುನಿಕ ಮಾನದಲ್ಲಿ ಗುರುತ್ವಾಕರ್ಷಣ ಶಕ್ತಿಗೆ ಚಲನೆಕೊಡುವ ಹಂತಕ್ಕೆ ತಲುಪಿದಾಗ ಮನುಷ್ಯ ಹಾರಬಲ್ಲ. ಹಾರುವ ಬಲವೂ, ಗಾಳಿಯ ಒತ್ತಡವೂ ಸಮಾನವಾದರೆ ಗಾಳಿಯು ಯಾವ ಮುಖಕ್ಕೆ ಒತ್ತಡವನ್ನು ಹುಟ್ಟಿಸುತ್ತದೆಯೋ ಅದರಂತೆ ಹಾರಬಲ್ಲ; ಹಾಗಿಲ್ಲದಿದ್ದಲ್ಲಿ ಹಾರಲಾರ. ಅದು ತಂತ್ರ ನಿಬಂಧನೆಯಂತೆಯೇ ಇರುತ್ತದೆ.
ಉದಾಹರಣೆ ೪:- ಮನುಷ್ಯ ಅಡುಗೆ ಮಾಡುವುದು, ನಡೆದಾಡುವುದು ಅಥವಾ ಇನ್ಯಾವುದೇ ಕೆಲಸ ಮಾಡುವುದೂ ಕೂಡಾ ಯಾವುದೇ ಒಂದು ತಂತ್ರ ನಿಬಂಧನೆಗೆ ಒಳಪಟ್ಟಿರುತ್ತದೆ.
ಇವೆಲ್ಲಾ ಬಾಹ್ಯ ದೃಗ್ಗೋಚರವಾದ ತಂತ್ರಗಳು. ತಂತ್ರವು ಇಷ್ಟೇ ಅಲ್ಲ. ಇನ್ನು ಹೆಚ್ಚಿನ ಅಗೋಚರ ಶಕ್ತಿಯ ಕಾರ್ಯವನ್ನು ಮಾಡುವ ಸೂತ್ರಗಳನ್ನು ಹೇಳಿದೆ. ಅದೇ ಈಗ ಬಳಕೆಯಲ್ಲಿರುವ ಸಾವಿರಾರು ಯಂತ್ರಗಳು. ಅವು ಯಾವ ಲೋಹದ ಹಾಳೆಯ ಮೇಲೆ ಅಥವಾ ಮರದ ತೊಗಟೆ ಅಥವಾ ವರ್ಣಸಂಯೋಜಿತ ಚಿತ್ರ ಪಟಗಳು ಅಥವಾ ಪ್ರತಿಮಾ ಸ್ವರೂಪಗಳಾಗಿರಬಹುದು. ಅಂದಾಜು ತಂತ್ರ ಶಾಸ್ತ್ರದಲ್ಲಿ ೧೦,೦೦೦ ಯಂತ್ರಗಳಿವೆ. ಅವುಗಳು ಹೇಗೆ ಕೆಲಸ ಮಾಡುತ್ತವೆ? ಅದು ಸಾಧ್ಯವೇ? ನೋಡೋಣ. ಯಂತ್ರಗಳು ಎಂದಾಗ ಮುಖ್ಯವಾಗಿ ಜಲಚರಿ, ಭೂಚರಿ, ಖೇಚರಿ ಯಂತ್ರಗಳು; ಇವು ಸಾಮಾನ್ಯ ಯಂತ್ರಗಳು. ಅವುಗಳಿಗೆ ಸ್ವರೂಪಗಳು ಇರುತ್ತವೆ. ಅವು ಆ ರೂಪಕ್ಕೆ ಬದ್ಧವಾಗಿರಬೇಕು. ಅಗೋಚರವಾಗಿ ಕೆಲಸ ಮಾಡುವ ಯಂತ್ರಗಳ ವಿಚಾರ ಮಾತ್ರಾ ಈಗ ಹೇಳುತ್ತೇನೆ.
ಈ ರೀತಿಯ ಯಂತ್ರಗಳು ಕೆಲ ರೇಖಾ ವಿನ್ಯಾಸದಲ್ಲಿರುತ್ತವೆ. ಅವಕ್ಕೆ ಸೀಮಿತ ಅಳತೆ, ಸೀಮಿತ ಕೋನ ಅಥವಾ ವೃತ್ತಗಳಿರುತ್ತವೆ. ದಳಾಕಾರದಲ್ಲೂ ಇರಬಹುದು. ಆದರೆ ಮೂಲವಾಗಿ ಆದಿ ತ್ರಿಕೋಣದಿಂದ ಆರಂಭಿಸಿ ಚತುಷಷ್ಠಿ ಕೋಣದವರೆಗೆ ಈ ಯಂತ್ರದ ಸ್ವರೂಪವಿರುತ್ತದೆ. ಆದರೆ ಆ ಕೋಣಗಳಿಗೆ ಒಂದು ಶಾಸ್ತ್ರಬದ್ಧವಾದ ನಿಯಮವಿದೆ. ಇನ್ನು ವೃತ್ತಗಳು - ಒಂದರಿಂದ ಇಪ್ಪತ್ನಾಲ್ಕರವರೆಗೆ ವೃತ್ತಗಳ ಸಂಯೋಜನೆ ಇದೆ. ವೃತ್ತಗಳಲ್ಲೂ ಕೂಡಾ ದೀರ್ಘ ವೃತ್ತಗಳೂ, ಅಂಡಾಕಾರ ವೃತ್ತಗಳೂ ಕೂಡಾ ಇವೆ. ಅಣುವಿನ ಸಂಯೋಜನೆಯಲ್ಲಿ ಎಲೆಕ್ಟ್ರಾನ್, ನ್ಯೂಟ್ರಾನ್‍ಗಳ ಪ್ರವಾಹವು ಅಣುವಿನ ಸಂಯೋಜನಾ ವಿಧಾನದಂತೆ ಹೇಗೆ ದೀರ್ಘ ಲಂಬ ಗೋಲವಾಗಿ ಕಂಡು ಬರುತ್ತದೋ, ಭೂಚಲನೆಯಲ್ಲಿ ಹೇಗೆ ವೃತ್ತ ಗುರುತಿಸಲ್ಪಟ್ಟಿದೆಯೋ, ಹಾಗೇ ವೃತ್ತ ಸಂಯೋಜನೆ ಮತ್ತು ದಳಾಕಾರ ಪತ್ರಾಕಾರದಲ್ಲಲ್ಲದೆ ಇನ್ನೂ ಕೆಲ ಆಕಾರದ ಸಂಯೋಜನೆ ಕೂಡಾ ಈ ವಿಧಾನದ ರೇಖಾ ವಿನ್ಯಾಸದಲ್ಲಿದೆ. ಅಲ್ಲಿ ಮುಖ್ಯವಾಗಿ ತಂತ್ರ ಶಾಸ್ತ್ರ ನಿಬಂಧನೆಗೊಳಿಸಲ್ಪಟ್ಟಿರುತ್ತದೆ. ಇದು ಯಂತ್ರದ ಸ್ವರೂಪವಾಯ್ತು.
ಆದರೆ ಯಂತ್ರದ ಚಲನೆಗೆ ಅಥವಾ ಕಾರ್ಯವೈಖರಿಗೆ ಒಮ್ದು ಶಕ್ತಿಯ ಪೂರೈಕೆ ಅಗತ್ಯವೇ ತಾನೇ? ಈ ರೀತಿಯ ಯಂತ್ರಕ್ಕೆ ಶಕ್ತಿಯ ಪೂರೈಕೆ ಎಲ್ಲಿಂದ? ಇದು ಕೆಲಸ ಮಾಡುವ ವಿಧಾನ ಹೇಗೆ? ಸಾಮಾನ್ಯ ಯಂತ್ರಗಳಿಗೆ ಇಂಧನ ಎಂಬ ಯಾವುದು ಶಕ್ತಿ ಮೂಲವಿರುತ್ತದೆಯೋ ಹಾಗೇ ಈ ಯಂತ್ರಗಳಿಗೆ ಮಂತ್ರವೆಂಬ ಶಕ್ತಿ ಮೂಲವಿರುತ್ತದೆ. ಮಂತ್ರವನ್ನು ಉಚ್ಚಾರಣಾ ವಿಧಾನದಂತೆ ಉಚ್ಚರಿಸಿದಾಗ ಅದರಿಂದ ಹೊರಡತಕ್ಕ ನಾದ ತರಂಗವೇ ಅದಕ್ಕೆ ಶಕ್ತಿಮೂಲ ಅಥವಾ ಅದೇ ಮಂತ್ರವು ಬೀಜರೂಪವಾದ ಬೀಜಾಕ್ಷರಗಳನ್ನು ಅದರಲ್ಲಿ ಲೇಖಿಸಿದಾಗ ನಿರಂತರವಾಗಿ ಅದರಿಂದ ಶಕ್ತಿ ಪೂರೈಕೆಯಾಗುತ್ತದೆ. ಮುಖ್ಯವಾಗಿ ಈ ರೀತಿಯ ಯಂತ್ರಗಳಲ್ಲಿ ಎರಡು ವಿಧವಿರುತ್ತದೆ. ಒಂದು ಕಿರಣ, ಅಂದರೆ ಬೆಳಕಿನ ಪ್ರತಿಫಲನ ಹೊಂದಿ ಕಿರಣವು ವಿಭಜಿಸಿ ವೃದ್ಧಿ ಹೊಂದುತ್ತಾ ಶಕ್ತಿ ರೂಪವಾಗಿ ಪರಿವರ್ತನೆ ಹೊಂದಿ ಕಾರ್ಯ ಸಾಧಿಸುತ್ತದೆ. ಇನ್ನೊಂದು ನಾದ ಸ್ವರೂಪವಾದ್ದು, ಶಬ್ದ ತರಂಗಗಳನ್ನು ಸೃಷ್ಟಿಸಿ ಸೂಕ್ಷ್ಮಾತಿಸೂಕ್ಷ್ಮ ತರಂಗ ರೂಪದಲ್ಲಿ ತನ್ನ ಶಕ್ತಿ ವೃದ್ಧಿಸಿಕೊಂಡು ಕಾರ್ಯ ಸಾಧಿಸುತ್ತದೆ.
ಈ ಎರಡು ಬಗೆಯಲ್ಲದೇ ಬೇರೇ ರೀತಿಯ ಅಗೋಚರ ಯಂತ್ರಗಳಿಲ್ಲ. ಈ ಎರಡು ಎಂದರೆ, ಕಿರಣ ಪ್ರಧಾನ ಯಂತ್ರ ಮತ್ತು ಶಬ್ದ ಪ್ರಧಾನ ಯಂತ್ರ. ಇವೆರಡೂ ಪ್ರತ್ಯೇಕವಾದ ತಂತ್ರಶಾಸ್ತ್ರ ನಿಬಂಧನೆಗೊಳಪಟ್ಟಿರುತ್ತದೆ. ಅದು ಕಿರಣ ವಿಭಜನೆಯ ಸೂತ್ರದಂತೆ ಮತ್ತು ಪರಸ್ಪರ ಪೂರಕವಾಗಿರುತ್ತದೆ. ನಾದ ಸ್ವರೂಪದ ಯಂತ್ರವು ನಾದ ಮತ್ತು ತರಂಗ ನಿಯಮಕ್ಕೆ ಒಳಪಟ್ಟಿರುತ್ತದೆ. ಇದಕ್ಕೆ ವಿರುದ್ಧವಾದಲ್ಲಿ ಅವು ಕೆಲಸ ಮಾಡಲಾರವು. ತಂತ್ರಶಾಸ್ತ್ರವು ಈ ಸೂತ್ರವನ್ನು ನಿಖರವಾಗಿ ತಿಳಿಸಿರುತ್ತದೆ. ಇನ್ನು ಶಕ್ತಿಯ ಪೂರೈಕೆಗೆ ಒಂದು ಮಂತ್ರವೋ ಅಥವಾ ಬೀಜಾಕ್ಷರ ವೋ ಇರುತ್ತದೆ ಎಂದು ಹೇಳಿದೆನಲ್ಲ, ಅದರ ರಹಸ್ಯವನ್ನು ತಿಳಿಸುತ್ತೇನೆ.
ಮಂತ್ರವೆಂದಾಗ ವೇದ, ಬ್ರಾಹ್ಮಣ, ಅರಣ್ಯಕಗಳಲ್ಲಿ ಇರದ ಯಾವುದೇ ಬೇರೆ ಮಂತ್ರವಿಲ್ಲ. ಆ ಮಂತ್ರಗಳ ಉಚ್ಚಾರಣಾ ವ್ಯತ್ಯಾಸದಿಂದ ಮಂತ್ರಗಳು ಬೇರೆ ಬೇರೆ ರೀತಿಯಲ್ಲಿ ಬಳಸಬಹುದು. ಸಾಮಾನ್ಯವಾಗಿ ಋಗ್ವೇದದಲ್ಲಿರುವ ಹೆಚ್ಚಿನ ಮಂತ್ರವೇ ಉಳಿದ ವೇದಗಳಲ್ಲಿ ಕೆಲ ವ್ಯತ್ಯಾಸಗಳಿಂದ ಕಂಡುಬರುತ್ತದೆ. ಹಾಗಿದ್ದಾಗ ವೇದಗಳೆಲ್ಲಾ ಸಮಾನವೆಂದಾಯ್ತು. ಹೇಳುವ ಧಾಟಿ ವ್ಯತ್ಯಾಸದಿಂದ ಮಂತ್ರವು ಬೇರೆ ಬೇರೆ ಕೆಲಸ ಮಾಡಲು ಸಾಧ್ಯ. ಹೇಗೆ ಎಂದರೆ, ಋಗ್ವೇದವು ಸ್ತುತಿ ಪ್ರಧಾನವಾದ ಮಂತ್ರ ಭಾಗವಾದರೆ ಯಜುರ್ವೇದವು ಯಜ್ಞ ಯಾಗಾದಿಗಳ ಸ್ವರೂಪ ವಿಧಾನವನ್ನು ಪ್ರಧಾನವಾಗಿ ತಿಳಿಸುತ್ತದೆ. ಹಾಗಾಗಿ ಸಾಮವು ಸಂಗೀತ ಪ್ರಧಾನವಾಗಿ ರಂಜನೀಯವಾಗಿ ದೇವತಾ ಕಾರ್ಯ ಸಾಧ್ಯಗೊಳಿಸುತ್ತದೆ.
ಇಲ್ಲಿ ಮುಖ್ಯವಾಗಿದ್ದು ಈ ಮೂರು ವೇದಗಳಲ್ಲಿ ಅಥರ್ವ ವೇದ, ಅಂದರೆ ನಾಲ್ಕನೆಯದಾಗಿ ಮಹರ್ಷಿ ವೇದವ್ಯಾಸರಿಂದ ವಿಭಜಿಸಲ್ಪಟ್ಟಿದ್ದು ಎಂದು ಗುರುತಿಸಲ್ಪಟ್ಟ ಭಾಗ. ಇದು ಅರ್ಥ ವೇದ ಎಂದು ಕೂಡಾ ಬಳಕೆಯಲ್ಲಿದೆ. ಈ ಭಾಗದ ಮಂತ್ರಗಳು ಈಗಿನ ಋಗ್ಯಜುಃಸ್ಸಾಮದಲ್ಲಿರುವ ಮಂತ್ರಗಳೇ, ಆದರೆ ಅಲ್ಲಿ ಉಚ್ಚಾರಣಾ ವ್ಯತ್ಯಾಸದಿಂದಾಗಿ ಅದು ಪರಿಣಾಮಕಾರೀ ಶಕ್ತಿಯಾಗಿ ಅಥವಾ ಸ್ಫೋಟಕವಾಗಿ ಧ್ವಂಸಕ ರೂಪುಗೊಳ್ಳುತ್ತದೆ. ಅಥರ್ವದಲ್ಲಿ ಅಥರ್ವ ಶಾಖೋಕ್ತ ಮಂತ್ರಗಳು ಬಿಟ್ಟರೆ ಬೇರೆ ಮಂತ್ರಗಳಿಗೆ ದ್ವ್ಯಕ್ಷರೀ ಪದ್ಧತಿ, ತ್ರ್ಯಕ್ಷರೀ ಪದ್ಧತಿ, ಏಕಾಕ್ಷರೀ, ಪಂಚಾಕ್ಷರೀ, ಅಷ್ಟಾಕ್ಷರೀ, ಸಂಯುಕ್ತಾಕ್ಷರೀ, ಷಡಕ್ಷರೀ ಪದ್ಧತಿ, ಅರ್ಧಾಕ್ಷರಿ ಪದ್ಧತಿ, ಹೀಗೆ ಅನುಲೋಮ ವಿಲೋಮ ಗತಿ ವಿಧಾನಗಳೂ, ಉಚ್ಚಾರಣಾ ವ್ಯತ್ಯಾಸ ಉಂಟುಮಾಡಲು ಮತ್ತು ಆ ಮಂತ್ರಗಳ ಮೇಲೆ ಭಾರ ಹಾಕಲು; ಅಂದರೆ ಅಥರ್ವ ಮಂತ್ರೋಚ್ಚಾರಣೆಯು ಕೆಲ ಉದ್ದೇಶಗಳಿಗೆ ಮಂತ್ರಕ್ಕೆ ಪೀಡನ, ಮರ್ಧನ, ತಾಡನ, ಛೇದನ, ಮೋಹನ, ಮಂಥನಗಳೆಂಬ ಆರು ವಿಧ ಉಚ್ಚಾರಣಾ ವಿಧಾನವಿದೆ. ಈ ಮೇಲ್ಕಂಡ ವಿಧಾನಗಳಿಂದ ಮಂತ್ರಗಳನ್ನು ಉಪಯೋಗಿಸುವ ವಿಧಾನ ಬಳಕೆಯಲ್ಲಿದೆ. ಹಾಗಾಗಿ ಅಥರ್ವವು ಒಂದು ಮಡಿವಂತಿಕೆಯವರಿಗೆ ಭಯಾನಕವಾದ ಭಾಗವಾಗಿ ಕಂಡಿದ್ದರಲ್ಲಿ ಅಪರಾಧವಿಲ್ಲ. ಯಾವುದೇ ಒಂದು ಮಂತ್ರವನ್ನು ಸ್ತೋತ್ರರೂಪವಾಗಿಯೇ ಅಥವಾ ಗಾನರೂಪವಾಗಿ ಬಳಸಿದಲ್ಲಿ ಅಥವಾ ಬಳಸಿದಾಗ ಬೇಕಾದ ತಕ್ಕ ಶ್ರಮ ಮತ್ತು ಸಮಯ ಗಣಿಸಿದರೆ ಅದರಲ್ಲಿ ಶತಾಂಶದಲ್ಲಿ ಅಥರ್ವ ರೀತ್ಯಾ ಅದೇ ಮಂತ್ರವನ್ನು ಬಳಸಿದರೆ ಅದರ ನೂರು ಪಟ್ಟು ಕಾರ್ಯ ಸಾಧ್ಯವಾಗುತ್ತದೆ ಎಂದಾದರೆ; ಆ ಪೀಡನ, ಮರ್ಧನ, ತಾಡನ, ಛೇದನ, ಮೋಹನ, ಮಂಥನಗಳ ಮಹತ್ವ ನಿಮಗೆ ಅರಿವಾದೀತು. ಆ ರೀತಿಯ ಪಾಠಕ್ರಮದಂತೆ ಪಾಠವಾದವರಿಗೆ ಮಾತ್ರ ಈ ವಿಚಾರ ಅರ್ಥವಾದೀತು.
ಇಲ್ಲಿ ಮುಖ್ಯ ಉದ್ದೇಶವು ಧ್ವನಿ ತರಂಗ ಉತ್ಪಾದಿಸುವುದಾಗಿರುತ್ತದೆ. ಈ ರೀತಿಯ ವಿಶೇಷ ತಂತ್ರಜ್ಞಾನವು ಅಥರ್ವದಲ್ಲಿದೆ. ಆದರೆ, ಈ ವಿಚಾರ ತಿಳಿದ ನೀವು ತಕ್ಷಣ ಅಥರ್ವ ವೇದದಲ್ಲಿ ಹುಡುಕಿದರೆ ನಿಮಗೆ ಸುಲಭ ಸಾಧ್ಯವಾಗಬಾರದೆಂದು ಎಲ್ಲಾ ಕಡೆ ಹಂಚಿದ್ದಾರೆ. ಅದಕ್ಕೆ ಒಂದು ಮುಖ್ಯ ಸೂತ್ರವಿಟ್ಟಿರುತ್ತಾರೆ. ಯಾವುದೇ ಒಂದು ಯಂತ್ರ ವಿಚಾರ ತೆಗೆದುಕೊಳ್ಳಿ. ಅದರ ರಚನಾ ವಿಧಾನ ಮತ್ತು ಕಾರ್ಯಕುಶಲತೆ, ಸಾಮರ್ಥ್ಯ, ಅದಕ್ಕೆ ಶಕ್ತಿಯ ಪೂರೈಕೆ ಎಂಬ ನಾಲ್ಕು ವಿಭಾಗ ಮಾಡಿದ್ದಾರೆ. ಅದು ಬೇರೆ ಬೇರೆ ಶಾಖೆಯ ಸಂಹಿತೆಯಲ್ಲೋ, ಬ್ರಾಹ್ಮಣದಲ್ಲೋ ಸೇರಿಸಿದ್ದಾರೆ. ಏಕೆಂದರೆ, ಈ ರೀತಿಯ ಮಹಾಸ್ತ್ರಗಳು, ಮಹಾಶಕ್ತಿಗಳು ಸಾರ್ವಜನಿಕವಾಗಿ ಸುಲಭದಲ್ಲಿ ದೊರಕಿದಲ್ಲಿ ಅನಾಹುತವಾದೀತು ಎಂದು ಅರ್ಥ.
(ಸಶೇಷ..)
ಇಂತು ಸಜ್ಜನ ವಿಧೇಯ,
ಕೆ. ಎಸ್. ನಿತ್ಯಾನಂದ,
ಪೂರ್ವೋತ್ತರೀಯ ಮೀಮಾಂಸಕರು,
ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು
(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)
No comments:
Post a Comment