Followers

Sunday, 1 January 2023

ಭಾರತೀಯರ ಕಾಲ ಗಣನೆಯೆ ಬದುಕಿನ ವಿಜ್ಞಾನ

*ಭಾರತೀಯರ  ಕಾಲ ಗಣನೆಯೆ - ಬದುಕಿನ ವಿಜ್ಞಾನವಿದು*
ಪ್ರಕೃತಿಯೇ ಒಪ್ಪದ ಜನವರಿ 01 ರಂದು ಹೊಸ ವರ್ಷ ಆರಂಭ ಆಗವುದೆಂತು ?

ಡಿಸೆಂಬರ್ ತಿಂಗಳು ಬಂತು‌ ಅಂದರೆ ಸಾಕು, ಎಲ್ಲರ ಯೋಚನೆ ಒಂದೇ..ಈಯರ್ ಎಂಡ್ ಪಾರ್ಟಿ, ಮೋಜು,ಮಸ್ತಿಗಳ ಯಾದಿ‌ ಮಾಡಿಕೊಂಡು ಪ್ರವಾಸ ಅಂತಲೋ, ಪಾರ್ಟಿ ಅಂತಲೋ, ಅಥವಾ ಮತ್ತೇನೋ ಒಟ್ಟಿನಲ್ಲಿ‌ ವರ್ಷಾಂತ್ಯವನ್ನು ಸಡಗರದಿಂದ ಕಳೆದು, ಹೊಸ ವರ್ಷವನ್ನು ಸಂಭ್ರಮದಿಂದ ಎದುರು ಗೊಳ್ಳುವ ಸಿದ್ಧತೆ ಜೋರಾಗಿರುತ್ತದೆ. ಅದರಲ್ಲೂ  ಕಾಲೇಜ್ ವಿದ್ಯಾರ್ಥಿಗಳು, ಸೋ ಕಾಲ್ಡ್ ವಿದ್ಯಾವಂತ ಯುವ ಸಮುದಾಯ ಹಾಗೂ ನೌಕರ ವರ್ಗದ್ದು  ಇದರಲ್ಲಿ ಸಿಂಹಪಾಲು ಎಂದರೆ ಅತಿಶಯೊಕ್ತಿಯಲ್ಲ.

ಆತ್ಮೀಯ ಭಾರತೀಯಬಂಧುಗಳೆ, 
ಒಮ್ಮೆ ನಿಧಾನವಾಗಿ ಈ‌ ಕಾಲಮಾನವನ್ನು ಗಮನಿಸಿ.

 ನಮ್ಮ ಜೀವನದ ಎಲ್ಲಾ ಸಾಂಸ್ಕೃತಿಕ ಸಾಂಪ್ರದಾಯಿಕ ಆಚರಣೆಗಳ ಕಾಲವನ್ನು  ಸೂಚಿಸುವ ಭಾರತೀಯ ಕಾಲಗಣನೆಯ ಪ್ರಕಾರ   ಹತ್ತನೇ (10) ತಿಂಗಳು ನಡೆಯುತ್ತಿದೆ. 

 ೧.ಚೈತ್ರ, ೨. ವೈಶಾಖ, ೩. ಜ್ಯೇಷ್ಠ, ೪ .ಆಷಾಢ, ೫. ಶ್ರಾವಣ , ೬. ಭಾದ್ರಪದ, ೭.ಆಶ್ವಯುಜ, ೮. ಕಾರ್ತಿಕ ಎಂಬ ಹೆಸರುಗಳ (ಆ ಹೆಸರಿಗೂ ಕಾರಣ ಇದೆ - ಚಿತ್ರಾ ವಿಶಾಖಾ ಇತ್ಯಾದಿ ೧೨ನಕ್ಷತ್ರಗಳು ಹುಣ್ಣಿಮೆಯ ದಿನ ಬರುವ ಕಾರಣ ಚೈತ್ರ ವೈಶಾಖ ಇತ್ಯಾದಿ ನಾಮಗಳು ಬಂದಿವೆ. 
ಹನ್ನೆರಡು ತಿಂಗಳುಗಳೂ ಕೂಡ ಇದೇ ನೆಲೆಯಲ್ಲಿ ಹೆಸರನ್ನು ಪಡೆದಿವೆ.) ಇಂದು ಹತ್ತನೇ (10) ತಿಂಗಳಾದ ಪುಷ್ಯ ಮಾಸದ  ಏಳನೇ ದಿನ . ಅರ್ಥಾತ್ 07.10.5124‌ ಇಂದಿನ ಕಾಲಗಣನೆಯ ದಿನಾಂಕವಾಗಿದೆ.

ಹೀಗಿರುವಾಗ ಪೂರ್ಣ ವರ್ಷ (365ದಿನಗಳು) ಮುಗಿದಿದೆ ಎಂದೂ, ಇನ್ನೊಂದು ದಿನ ಕಳೆದರೆ ಹೊಸವರ್ಷ  ಆರಂಭ  ಎಂದು ಒಪ್ಪುವುದು ಹೇಗೆ?? ನೀವೇ ಯೋಚಿಸಿ.

ಇಷ್ಟಕ್ಕೂ ಈ  "ಡಿಸೆಂಬರ್ 31 ನ್ನು"  ಈ ವರ್ಷದ ಕೊನೆಯ ದಿನವೆಂದೂ  ಮತ್ತು  "ಜನವರಿ 01" ನ್ನು *ಹೊಸವರ್ಷದ ಮೊದಲ ದಿನ  ಎಂದು "ನಮಗೆ" ಯಾರು ಹೇಳಿದವರು?

ನಾವು ಆಚರಣೆಯಲ್ಲಿರಿಸಿಕೊಂಡ  ಯಾವ ಧರ್ಮಗ್ರಂಥಗಳಲ್ಲಿ ಅಥವಾ ಸಂವಿಧಾನದಲ್ಲಿ  ಇದರ ಉಲ್ಲೇಖ ಇದೆ? 
ನಮ್ಮ ದೇಶದ ಯಾವ ಇತಿಹಾಸದ ಪುಟದಲ್ಲಿ ಇದು ದಾಖಲಾಗಿದೆ? 
ಅಥವಾ 
 ನಮಗೆ ಯಾವ ಧರ್ಮ ಗುರುಗಳು ಇದನ್ನು ಬೋಧಿಸಿದ್ದರು/ಬೋಧಿಸಿದರು??  

ಈ ಮೇಲಿನ ಯಾವ ಕಾರಣವೂ ಇಲ್ಲದೆಯೂ  ಆ ಗುಂಗಿನಲ್ಲಿ ತೇಲುತ್ತಿದ್ದೇವೆ.  
ಇಷ್ಟಕ್ಕೂ ಈ ಸಂಭ್ರಮ(?) ಆಚರಣೆಯ ಹಿನ್ನೆಲೆಯಾಗಿ ನಮ್ಮ ದೇಶೀಯ ಸಂಸ್ಕೃತಿಯ ಐತಿಹಾಸಿಕ, ಧಾರ್ಮಿಕ, ಪಾರಂಪರಿಕ ಹೀಗೆ ಯಾವುದಾದರೂ ಒಂದೇ ಒಂದಾದರೂ ಮಹತ್ತ್ವವನ್ನು ಯಾ ಕಾರಣವನ್ನು ನಾವು ಕಾಣಲು ಸಾಧ್ಯವಿದೆಯೇ?

"ಇತಿಹಾಸದ ಪುಟಗಳಲ್ಲಿ ಇಣುಕಿದಾಗ"

ನಾವು‌ ಭಾರತೀಯರು, ಬೌದ್ಧಿಕತೆಗಿಂತ  ಭಾವನಾತ್ಮಕವಾದ ನೆಲೆಯಲ್ಲಿ ಬದುಕನ್ನು ಕಂಡುಕೊಂಡವರು. ಪ್ರಾಯಶಃ  "ವಿವಿಧತೆ ಯಲ್ಲಿ ಏಕತೆ" ಸಾಧ್ಯವಾಗಿದ್ದು ಈ ಕಾರಣಕ್ಕೆ. ಅಮೇರಿಕದಂತ ಅಮೇರಿಕಾದಲ್ಲಿ ಕೂಡ ಇಂದಿಗೂ ಕರಿಯರು ಮತ್ತು ಬಿಳಿಯರು ಎಂಬ ವರ್ಗೀಕರಣ ವ್ಯವಸ್ಥೆ ತನ್ನ ಪ್ರಾಬಲ್ಯ ಮುಂದುವರಿಸಿರುವಾಗಲೂ ಭಾರತ ಇದನ್ನು ಮೀರಿ ನಿಂತಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೆ !??
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಎಂತಹ ಅನುಪಮ ಎಂದು ಪುನಃ ತಿಳಿಯಬೇಕಿಲ್ಲ ತಾನೆ!!

ಆದರೂ ಒಂದಾನೊಂದು ಕಾಲದಲ್ಲಿ
 ನಮ್ಮ ಭಾವುಕತೆಯ ದೌರ್ಬಲ್ಯವನ್ನೇ ತಮ್ಮ ಪ್ರಾಬಲ್ಯಕ್ಕೆ ಅಸ್ತ್ರವಾಗಿಸಿಕೊಂಡು ಪ್ರಪಂಚದಲ್ಲಿ ತಮ್ಮ  ಧರ್ಮವಿಸ್ತಾರದ ಕನಸು ಕಂಡು ಓಡಾಡುತ್ತಿದ್ದ "ಮಹನೀಯ"ರಿಗೆ  ನಮ್ಮ ದೇಶ ಕಂಡಿತು.
ಇಲ್ಲಿರುವ ಸಂಪತ್ತು ,  ಇಲ್ಲಿನವರ ಮುಗ್ಧತೆ ಸರಳತೆ ಪ್ರಾಮಾಣಿಕತೆಗಳು ಅವರ ಧರ್ಮಾಂಧತೆ ಮೆರೆಯಲು ಹೆದ್ದಾರಿಯನ್ನೇ ನಿರ್ಮಿಸಿಕೊಟ್ಟಿತು. 

ಸ್ವಾತಂತ್ರ್ಯ ಬಂದಿದ್ದು ಯಾವ ಕ್ಷೇತ್ರದಲ್ಲಿ???

 ನಾವು ಸ್ವತಂತ್ರರು, ಎಂದು ಎದೆ ತಟ್ಟಿ ಹೇಳಲು ಆರಂಭಿಸಿ ಮುಕ್ಕಾಲು ಶತಮಾನ ಕಳೆದರೂ ನಿಜವಾಗಿ "ಭಾರತೀಯತೆಗೆ" ಸ್ವಾತಂತ್ರ್ಯ ಸಿಕ್ಕಿದೆಯೆ? ಎಂಬ ಪ್ರಶ್ನೆ ಗೆ ಉತ್ತರವನ್ನು ತಡಕಾಡುವ ಸ್ಥಿತಿ ಈಗಲೂ ಹಾಗೆಯೇ ಇದೆ.
ಇದಕ್ಕೆ ಕಾರಣ, ಹಲವು , ಅದರಲ್ಲಿ  ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಕ್ರೈಸ್ತ ಮಿಶನರಿಗಳ ಕೈಗೆ ಉದಾರವಾಗಿ ಒಪ್ಪಿಸಿ ಕೈಮುಗಿದಿದ್ದು ಒಂದು.  
ಆಗಿನ ಪ್ರಧಾನಮಂತ್ರಿಗಳಾದಿಯಾಗಿ ಯಾರಿಗೂ ಭಾರತೀಯ ಪಾರಂಪರಿಕ ಹಾಗೂ ಭಾರತಕ್ಕೆ ಸ್ವಾವಲಂಬಿಗಳಾಗಲು  ಅಪೇಕ್ಷಿತವಾದ ಶಿಕ್ಷಣ ವ್ಯವಸ್ಥೆ ಬೇಕೆಂದು ಅನಿಸದೇ ಹೋಗಿದ್ದು ಏಕೆ?? ಸದಾ ಕಾಡುವ ಪ್ರಶ್ನೆ . ಎಂತಹ ವಿಪರ್ಯಾಸ!!!!  ಛೆ..!!!!!

"ಭಾರತೀಯರು ಧರ್ಮಾಂಧರು" ಎಂದು ಹೇಳುವುದನ್ನು ಕೇಳಿದ್ದೇವೆ.  ನಿಜಕ್ಕಾದರೆ  ನಮ್ಮ ದೇಶದ ಸಂಸ್ಕೃತಿಯ ಮೇಲೆ ದಾಳಿ ಮಾಡಿ,‌ ಅದನ್ನು ಹಾಳುಮಾಡಿ,  ಅದೂ ಸಾಲದು ಅಂತ ಆದಾಗ  ಇಡೀ ಶಿಕ್ಷಣವ್ಯವಸ್ಥೆಯನ್ನೇ ಪೂರ್ಣವಾಗಿ ರೂಪಾಂತರ ಮಾಡಿದ್ದನ್ನು ಇತಿಹಾಸ ಹೇಳಬೇಕಿದೆ ಇದನ್ನು. "ನೈಜ" ಇತಿಹಾಸದ ಪುಟಗಳು ಉತ್ತರಿಬೇಕಿವೆ.ನಿಜ ಇತಿಹಾಸ ಹೇಳಲು ಉದ್ಯುಕ್ತರಾದವರ ಧ್ವನಿಯನ್ನು ಸರಕಾರವೇ ಅಡಗಿಸುವ ದುಸ್ಸ್ಥಿತಿ‌ಯಲ್ಲಿ ಬದುಕು ಸಾಗುತ್ತಿದೆ .ಹೊಸ ತಲೆಮಾರಿಗೆ ನೈಜ ಇತಿಹಾಸದ ಪಾಠ್ಯಗಳನ್ನು ನೀಡಲು ಉದ್ಯುಕ್ತರಾದವರು ಇವರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸುವುದು ಇನ್ನೊಂದು ದುರಂತವೇ ಸರಿ.
÷÷÷÷÷÷÷÷÷÷÷÷÷÷÷÷÷÷÷÷÷
*ಇಂದೇಕೆ ಈ ಮಾತುಗಳು !??*

ಏಕೆಂದರೆ,ಜನವರಿ ಒಂದನೇ ತಾರೀಕಿಗೆ ಹೊಸವರ್ಷ ಆರಂಭ ಎಂದು  ಹೇಳುವಾಗಲೆಲ್ಲ ಮನಸಿನಲ್ಲಿ ಬರುವ ಆಲೋಚನೆಗಳಿವು.
"ಭಾರತ  ದೇಶವನ್ನು ಕಬಳಿಸಲು, ಒಡೆಯಲು, ಸಂಸ್ಕೃತಿಯ ನ್ನು ಮೊದಲು ಹಾಳಮಾಡಬೇಕು" ಎಂದು ಓರ್ವ ಬ್ರಿಟಿಷ್ ಅಧಿಕಾರಿ ನೀಡಿದ ಹೇಳಿಕೆಯನ್ನು "ಚಾಚೂ" ತಪ್ಪದೇ ಪಾಲಿಸಿದ್ದಕ್ಕೆ ಇಂದಿನ ಭಾರತೀಯರ ದುರ್ಬಲ ಚಿಂತನೆಯು ಕೈಗನ್ನಡಿ ಹಿಡಿದಂತೆ ಭಾಸವಾಗುತ್ತದೆ. 
ಮುಂದುವರಿದು, ಬಡವ ಬಲ್ಲಿದ ಭೇದವಿಲ್ಲದೆದ, ಇಂದಿಗೂ ಬಲವಂತದ ನಯ-ನಾಜೂಕಿನ ಹಣದ ಆಮಿಷಾದಿಗಳ ಬೆಂಬಲದೊಂದಿಗೆ "ಮತಾಂತರ" ಅವ್ಯಾಹತವಾಗಿ ನಡೆಯುತ್ತಿರುವುದು  ಇದೇ ಕಾರಣಕ್ಕಾಗಿ.
"ಇಂದಿನ ಹೊಸವರ್ಷದ ಸಂಭ್ರಮದ ಹಿಂದಿನ ಕುತಂತ್ರ ಕರಾಮತ್ತು ಗಳನ್ನು ಯೊಚಿಸುವಾಗ ನಾವೆಷ್ಟು ಸ್ವಾಭಿಮಾನಶೂನ್ಯರು ಅಂತ ಅನಿಸದೇ ಇರದು !

ಇದಕ್ಕೆ ಕಾರಣ ಇಂದಿನ ಯುವಜನತೆ ಖಂಡಿತಕ್ಕೂ ಅಲ್ಲ. ಇಂದಿನಂತೆ ಕಳೆದ ಕೆಲವು ತಲೆಮಾರುಗಳ ಯುವಜನತೆಯ ಹಾದಿ ತಪ್ಪಿಸಿದ, ಧರ್ಮಾಂಧತೆ ಮೆರೆದ ಜಗತ್ತಿನ ಕೆಲವು ಮಹನೀಯ ಧರ್ಮಗಳು ಹಾಗೂ  ಧರ್ಮ ಗುರುಗಳ ಸಂತಾನ. 

ಭಾರತಿಯ ಕಾಲಗಣನೆ ಕಣ್ಮೆರೆಯಾಗಿ  ಕ್ರಿಸ್ತಶಕದ ಕ್ಯಾಲೆಂಡರ್ ಮನೆ ಮನೆಗೆ ಬಂದಿದ್ದು ಹೇಗೆ ?? ಕ್ರಿಸ್ತ ಭಾರತೀಯರ ಶಕಪುರುಷನೇ ??

ರಾಜಕೀಯ ಇಚ್ಛಾಶಕ್ತಿ, ದುರಾಸೆಗಳ ಕಹಿಫಲವೇ ಕ್ರಿಸ್ತ ಶಕ ವರ್ಷದ ಕ್ಯಾಲೆಂಡರ್ ಗಳು ಆಚರಣೆಗೆ ಬರಲು ಕಾರಣ. 
ಇಂದು ಇದರ ದುಷ್ಪರಿಣಾಮದಿಂದ  ನಮ್ಮ  ದೇಶದ ಕಾಲಗಣನೆಯನ್ನು ಮರೆತು ಅಂಧಾನುಕರಣೆ ಮಾಡಿ ಹೊಸವರ್ಷದ ಸಂಭ್ರಮಕ್ಕೆ ಸಿದ್ಧರಾಗಿದ್ದೇವೆ.

ಭಾರತೀಯ ಹಬ್ಬ-ಹರಿ ದಿನಳಿಗೆ ಇಂದಿಗೂ ಶಾಲಾ ಕಾಲೇಜುಗಳಲ್ಲಿ ಪೂರ್ಣವಾಗಿ ರಜೆ ಇಲ್ಲ.  ಉದಾ - ನವರಾತ್ರಿ - ಒಂಭತ್ತು ದಿನಗಳ ನಾಡ ಹಬ್ಬಕ್ಕೆ ಶಿಕ್ಷಣ ವ್ಯವಸ್ಥೆಯ ಭಾಗಶಃ ಅಂಶವನ್ನು ಹೊರತುಪಡಿಸಿ ಸಾರ್ವಜನಿಕವಾಗಿ  ಕೇವಲ ಎರಡು ದಿನ ಮಾತ್ರ ರಜೆಗಳಷ್ಟೆ!? ಅಲ್ಲವೆ!? ಈ ಮಾತಿನ ಉದ್ದೇಶ ರಜೆ ಹೆಚ್ಚಾಗಬೇಕೆಂಬುದಲ್ಲ . ಹಾಗಿದ್ದರೂ ಕ್ರಿಸ್ಮಸ್ ರಜೆ ಎಂದು  ಒಂದು ವಾರ ರಜ ಘೋಷಣೆಯ ಹಿಂದಿನ ಕಾಣದ ಕೈಗಳು ಯಾವವು ? ಭಾರತದಲ್ಲಿ ಹಿಂದೂ ಜನಾಂಗ. ಸನಾತನ ಸಂಸ್ಕೃತಿ ಅಲ್ಪಸಂಖ್ಯಾತವಾಯಿತೆ? 

ನಮ್ಮ ದೇಶದ ಸಂಸ್ಕೃತಿಯನ್ನು ಯಾರಿಗೂ ತಿಳಿಯದಂತೆ  ನಿಧಾನವಾಗಿ ನಾಶ ಮಾಡಲು ಇಂತಹ ಅನೇಕ  ನಯವಂಚನೆಯ ಕೆಲಸಗಳನ್ನು ರಾಜಕೀಯ ಬಲವನ್ನು ಬಳಸಿಕೊಂಡು ಎಂದೋ ಮಾಡಿದ್ದಾರೆ..  ರಜೆ ಎಂದರೆ ಯಾರಿಗೆ ತಾನೆ ಬೇಡ? ಅಲ್ಲವೆ. ಇಂತಹ ನಮ್ಮ ಕೆಲವು ಸಹಜವಾದ ಮಾನಸಿಕತೆಯನ್ನು  ಬಳಸಿ ಬೆಳೆಸಿದ ಚಿಂತನೆಗಳು ಇವೆಲ್ಲವೂ.  ನವರಾತ್ರಿ ಆಚರಣೆ ಒಂಭತ್ತುದಿನಗಳಲ್ಲಿ ನಡೆಯುತ್ತದೆ.  ರಜೆ ಇದ್ದರಲ್ಲವೇ? ಎಲ್ಲರೂ ಸೇರಿ ಆಚರಣೆ ಮಾಡುವುದು.  ಆದ್ದರಿಂದ ಅದಕ್ಕೆ ರಜೆಯೇ ಇಲ್ಲದಷ್ಟು ವ್ಯವಸ್ಥೆ ಮಾಡಿದ್ದಾರೆ.  ಆದರೆ ಅದನ್ನು ಆಚರಿಸಲಿಕ್ಕೇ ಆಗದಷ್ಟು  ನಮಗೆ ಯಾರಿಗೂ  ತಿಳಿಯದಷ್ಟು  ಸಹಜವಾದ ವಂಚನೆ  ರಾಷ್ಟ್ರ ಮಟ್ಟದಲ್ಲಿ ನಡೆದು ಹೋಗಿದೆ.  ಇದನ್ನು ಚಿಂತನೆ ಮಾಡಿ ತೀರ್ಮಾನ ಮಾಡುವುದು ನಿಮಗೆ ಬಿಟ್ಟಿದ್ದು. 

ಭಾರತೀಯ ಬಂಧುಗಳೆ,  ಒಮ್ಮೆ ಯೋಚಿಸಿ -

*೧. ಗಣೇಶನ ಚತುರ್ಥಿ, ನವರಾತ್ರಿ, ವಿಜಯದಶಮಿ, ಭೂಮಿಹುಣ್ಣಿಮೆ,* *ನರಕಚತುರ್ದಶಿ, ದೀಪಾವಳಿ, ಬಲಿಪಾಡ್ಯಮಿ, ತುಳಸಿವಿವಾಹ, ರಕ್ಷಾಬಂಧನ, ಆಟಿ, ಶಿವರಾತ್ರಿ,* *ಮಕರ ಸಂಕ್ರಾಂತಿ, ರಾಮನವಮಿ, ದುರ್ಗಾಷ್ಟಮಿ, ರಥಸಪ್ತಮಿ ಇತ್ಯಾದಿ ಇತ್ಯಾದಿ ಹಬ್ಬ- ಹರಿದಿನಗಳನ್ನು* *"ಕ್ರಿಸ್ತಶಕ"ದ  ಕ್ಯಾಲೆಂಡರ್ ಅನ್ನು ಅನುಸರಿಸಿ ಆಚರಿಸಿದ್ದೇವೆಯೆ?*

ನಮ್ಮಲ್ಲಿ ಶಕಪುರುಷರುಗಳು ಅನೇಕರಿದ್ದರು.‌ ಇಂದಿಗೂ ಪಂಚಾಂಗಗಳಲ್ಲಿ ಇವುಗಳ ಉಲ್ಲೇಖ ಇದೆ.  *ಪ್ರಸ್ತುತ ಶಾಲಿವಾಹನ ಶಕಪುರುಷ.‌ ಆದರೆ ನಮ್ಮ ಕ್ಯಾಲೆಂಡರ್ ಕ್ರಿಸ್ತಶಕ ಆಧಾರಿತವಾಗಿರುವುದೇ ಮುನ್ನೆಲ್ಲೆಯಲ್ಲಿ ಕಾಣುತ್ತಿದೆ. ಅದನ್ನೆ ಅಂಧರಾಗಿ ಅನುಸರಿಸುತ್ತಾ ಇದ್ದೇವೆ. ಹಾಗಾದರೆ,  ಭಾರತೀಯರಿಗೆ ಕ್ರಿಸ್ತ ಶಕಪುರುಷನಾಗಿದ್ದು ಹೇಗೆ ? ಯಾರಿಂದ? ಯಾವಾಗ? ಯೋಚಿಸಿ* 
 ಕೋಟಿ-ಕೋಟಿ ವರ್ಷಗಳ ಇತಿಹಾಸವನ್ನು ಗ್ರಂಥವಾಗಿ ಪುರಾಣವಾಗಿ ಹೊಂದಿರುವ ಭಾರತ ದೇಶದ ಕಾಲ ಗಣನೆಯ ಅಗಾಧತೆಯ ಮುಂದೆ ಮೊನ್ನೆ - ಮೊನ್ನೆ ಬಂದ ಕ್ರಿಸ್ತ ಶಕಪುರುಷನಾಗಲು ಸಾಧ್ಯವೆ? 

*೨. ಎಂದಾದರೂ ನಮ್ಮ ಧಾರ್ಮಿಕ ಆಚರಣೆಗಳಾದ ಉಪಾಕರ್ಮ, ಪಿತೃ ಗಳಿಗೆ ತರ್ಪಣ ನೀಡಿ ಸ್ಮರಿಸುವ ಮಹಾಲಯ ಅಮಾವಾಸ್ಯೆ, (ಪಿತೃ ಪಕ್ಷ),ಗಂಗಾಷ್ಟಮಿ, ಭೂಪೂಜೆ , ಇತ್ಯಾದಿಗಳನ್ನು  ಕ್ರಿಸ್ತಶಕದ  ಕ್ಯಾಲೆಂಡರ್ ಅನ್ನು ಅನುಸರಿಸಿ ಆಚರಿಸಿದ್ದೇವೆಯೆ?*

*೩.ನಮ್ಮ ಮನೆಯಲ್ಲಿ‌ ನಡೆಯುವ ಶುಭಕಾರ್ಯಗಳು, ಮದುವೆ ಉಪನಯನ ಇತ್ಯಾದಿಗಳಲ್ಲಿ ಎಂದಾದರೂ  ಈ ಕ್ರಿಸ್ತಶಕದ  ಕ್ಯಾಲೆಂಡರ್ ಪ್ರಯೋಜನ ಕ್ಕೆ ಬಂದಿದೆಯೆ? ಪಂಚಾಂಗ ಆಧಾರಿತ ಮುಹೂರ್ತವನ್ನಲ್ಲವೇ ನಾವು ಒಪ್ಪಿಕೊಂಡಿದ್ದು.?!!*

*೪. ಎಂದಾದರೂ ಮನೆಯಲ್ಲಿ ನಡೆಯುವ ಶ್ರಾದ್ಧಾದಿ ಹಿರಿಯರ ದಿನಗಳನ್ನು ಈ ಕ್ರಿಸ್ತಶಕದ  ಕ್ಯಾಲೆಂಡರ್ ಪ್ರಕಾರ ಆಚರಿಸಿದ್ದೇವೆಯೆ?*

*ಇದೆಲ್ಲ ನಮ್ಮ ಭಾರತೀಯ (ಕ್ಯಾಲೆಂಡರ್)ಪಂಚಾಂಗದ ಪ್ರಕಾರ ನಡೆಯುತ್ತಿದೆಯಲ್ಲವೆ?*

*"ಇತರ ಎಲ್ಲಾ ಧರ್ಮಗಳನ್ನು ಗೌರವಿಸೋಣ ಭಾರತೀಯತೆಯನ್ನು ಅನುಸರಿಸೋಣ"*
ನಮ್ಮ ಆಚಾರ ವಿಚಾರಗಳಿಗೆ ಸಂಬಂಧವೇ ಇಲ್ಲದ , ಅಂತಾರಾಷ್ಟ್ರೀಯಸ್ತರದ ಹಾಗೂ ವ್ಯಾವಹಾರಿಕ ಬದುಕಿಗೆ (ಮಾತ್ರ) ಅಗತ್ಯವಾದ, ಕ್ರಿಸ್ತಶಕದ ಕ್ಯಾಲೆಂಡರ್ ನ ಹೊಸವರ್ಷ ದ ಸಂಭ್ರಮಾಚರಣೆ ನಮ್ಮ ಸಂಸ್ಕೃತಿಯನ್ನು ಹಾಳುಮಾಡುವ ಹುನ್ನಾರಗಳಾಗಿಯೇ ಕಾಣುತ್ತದೆ. 

“ ಒಂದು ಮಾಹಿತಿಯ ಪ್ರಕಾರ ಜ್ಯೂಲಿಯಮ್ ಹಾಗೂ ಗ್ರೆಗೋರಿಯನ್ ಆಧಾರಿತ ಕ್ರಿಸ್ತಶಕ ಎಂಬ ಕ್ಯಾಲೆಂಡರ್ ನಲ್ಲಿ ಕಾಲಗಣನೆ ಲೆಕ್ಕವನ್ನು ಸರಿಹೊಂದಿಸಲಿಕ್ಕೋಸ್ಕರ ಹತ್ತು ದಿನಗಳನ್ನು ಕಳೆಯಲಾಗಿದೆ. ಆ ವರ್ಷ ಕ್ರಿ.ಶ.೧೫೮೨ ಎಂದು ಕ್ಯಾಲೆಂಡರ್ ತಜ್ಞರ ಅಭಿಪ್ರಾಯ.” ಅರ್ಥಾತ್ ಇದೊಂದು ಅವೈಜ್ಞಾನಿಕ ಕಾಲಗಣನೆಯ ಕ್ಯಾಲೆಂಡರ್. ಇಂದು ನಂಬಲು ಕಷ್ಟ ಆದೀತು. ಈ ಅಸಮರ್ಪಕ ಕಾಲಗಣನೆ ಎಲ್ಲಿ? ಕೋಟಿ-ಕೋಟಿ ವರ್ಷಗಳ ಲೆಕ್ಕವನ್ನು ಈಗಲೂ ಬ್ರಹನ ಆಯುಷ್ಯದಿಂದ ಆರಂಭಿಸಿ ಗಣಿಸುವ ಭಾರತೀಯ ನಿಖರವಾದ ಕಾಲಗಣನೆ ಎಲ್ಲಿ ? 

*ಇತರರನ್ನು ಗೌರವಿಸೋಣ - ನಮ್ಮದನ್ನು ಅನುಸರಿಸೋಣ"*
 ಕ್ರಿಸ್ತ ಧರ್ಮಾವಲಂಬಿಗಳು ಇದನ್ನು ಸಂಭ್ರಮದಿಂದಲೇ ಆಚರಿಸಲಿ. ಅವರ ಸಂಭ್ರಮಕ್ಕೆ ಅರ್ಥವಿದೆ." (ಇಲ್ಲಿ ಯಾರನ್ನೂ ನಿಂದಿಸುವ ಅಥವಾ ನೋಯಿಸುವ  ಉದ್ದೇಶದಿಂದ ಯಾವ ಮಾತನ್ನೂ ಬರೆದಿಲ್ಲ.) ಆದರೆ, ಯಾವುದೇ  ಓರ್ವ ಪಾದ್ರಿ ಅಥವಾ ಚರ್ಚ್  ನಮ್ಮ ಹೊಸ ವರ್ಷವಾದ ಯುಗಾದಿ/ವಿಷುವನ್ನು ಆಚರಿಸಿದ ನಿದರ್ಶನವಿದೆಯೆ??   
ಹಾಗೂ ಇಂತಹ ಸಂಭ್ರಮವನ್ನು ಆಚರಿಸುವ ನೆಪದಲ್ಲಿ  ಮತಾಂತರದ ಪ್ರಕ್ರಿಯೆ ಆರಂಭವಾಗಿರುತ್ತದೆ ಎಂಬ ನಗ್ನ ಸತ್ಯ ಎಲ್ಲರಿಗು ತಿಳಿದೇ ಇದೆ. 
ಆದ್ದರಿಂದ ಮತಾಂತರದಂತ ಪಿಡುಗಿಗೂ ಈ ಹೊಸ ವರ್ಷದ ಸಂಭ್ರಮಾಚರಣೆಗೂ ನಿಕಟ ಸಂಬಂಧವಿದೆ ಎಂದು ತರ್ಕಿಸಬಹುದು. 
ಹಾಗಾಗಿ ಭಾರತೀಯ ಸಂಸ್ಕೃತಿ ಪ್ರಿಯರೆ, ‌ನಾವು ನಮ್ಮ (ಕ್ಯಾಲೆಂಡರ್) ದಿನದರ್ಶಿಕಾ/ಪಂಚಾಂಗದ  ಪ್ರಕಾರ ಆಚರಿಸೋಣ. ಆಗ ನಮ್ಮ ಸಂಭ್ರಮಕ್ಕೂ ಅರ್ಥ ಬರುತ್ತದೆಯಲ್ಲವೆ??  
ಭಾರತೀಯರಿಗೆ ಬೇಕು ಭಾರತೀಯ ಕಾಲಗಣನೆ.
ಅದುವೇ ಕಾಲಗಣನೆಯ ವಿಜ್ಞಾನ - ಅದುವೇ ನಮ್ಮ ಪಂಚಾಂಗ.
ಯುಗಾದಿ ಹಾಗೂ ವಿಷು ಭಾರತೀಯ ಹೊಸ ವರ್ಷ. 
ಇವುಗಳೇ ಇದರ ಮುಖ್ಯ ಧ್ಯೇಯೋದ್ದೇಶಗಳಾಗಿವೆ.

ಹೌದು,  ನಮ್ಮ ದಿನದರ್ಶಿಕಾ ಅಂದರೆ ಅದೇ ನಮ್ಮ ಪಂಚಾಂಗ. ಇದರ ಪ್ರಕಾರ ಇಂದಿನ್ನೂ 10ನೇ ತಿಂಗಳ 07ನೇ ದಿನ ನಡೆಯುತ್ತಿದೆ.  ಅರ್ಥಾತ್ ಈ ಶುಭಕೃತ್  ನಾಮ  5124ನೇ ಕಲಿವರ್ಷವು  ಕಳೆಯಲು ಇನ್ನೂ 02 ತಿಂಗಳು 23 ದಿನಗಳಷ್ಟು ಅವಧಿ ಬಾಕಿ ಇದೆ. 

ಆದ್ದರಿಂದ ಭಾರತೀಯರಾದ ನಾವು ನಾಳೆಯ ದಿನವನ್ನು ಹೊಸವರ್ಷ ವಾಗಿ ಆಚರಿಸುವುದು ಯುಕ್ತವೇ?? ಯೋಚಿಸಿ ನಿರ್ಧರಿಸಿ.

ನಮ್ಮ ದೇಶೀಯ ಸಂಸ್ಕೃತಿಯ ನೆಲೆಯಲ್ಲಿ ಇನ್ನೂ 02.27 ತಿಂಗಳ ನಂತರವೇ ಹೊಸವರ್ಷ. ಅದುವೇ ಯುಗಾದಿ / ವಿಷು .  *ಪ್ರಕೃತಿ ಕೂಡ ಆ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತದೆ.* ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಿಚ್ಚಳವಾಗಿ  ಆ ಸಂದರ್ಭದಲ್ಲಿ ಬದಲಾವಣೆ ಕಾಣುತ್ತದೆ. ಅದೇ ನಿಜವಾದ ಹೊಸವರ್ಷ. ವೈಜ್ಞಾನಿಕವಾಗಿಯೂ ಯುಗಾದಿಗೆ ಹೊಸವರ್ಷದ  ಸಂಭ್ರಮವನ್ನು ಆಚರಿಸಲು ಪ್ರಾಕೃತಿಕ ಬದಲಾವಣೆ ಮುದ್ರೆಯನ್ನೊತ್ತುತ್ತದೆ.  ಇದು ಗಮನಾರ್ಹ.
ಇಂತಹ ಪ್ರಕೃತಿ ಒಪ್ಪಿದ ದಿನವೇ ಹೊಸ ವರ್ಷವಾಗಿದೆ. ಅಂದು ಹೊಂದುವ ಹೊಸ ಹರ್ಷಕ್ಕೂ ಅರ್ಥವಿದೆ. ಇದಕ್ಕೆ ತಳಹದಿಯಾಗಿರುವುದೇ ಭಾರತೀಯ ಪಂಚಾಂಗವಾಗಿದೆ.

ಪಂಚಾಂಗ ಎಂದರೆ ಕಾಲದ ಲೆಕ್ಕಾಚಾರದ ಪಂಚ ಅಂಗಗಳೆ ಅಗಿವೆ.  ತಿಥಿ ಕರಣ ಯೋಗ ವಾರ ನಕ್ಷತ್ರಗಳೇ ಕಾಲದ ಪಂಚ ಅಂಗಗಳು.
ಇಂತಹ ಪಂಚಾಂಗವೇ ನಮ್ಮ ಭಾರತೀಯ ಕಾಲಮಾನದ ಭದ್ರ ತಳಪಾಯ.  
ಅದು ಗಣಿತ - ಖಗೋಳ - ಭೂಗೋಳಗಳ ಸಮನ್ವಯವೇ ಆಗಿದೆ. ಈ ಮೂರು ಲೋಕಗಳ ಅಂತಸ್ಸಂಬಂಧದ ವಿಸ್ಮಯವನ್ನು  ತೆರೆ ತೆರೆದು ತೋರುತ್ತದೆ. 
ಆದ್ದರಿಂದ ಧಾರ್ಮಿಕತೆಯ ಜೊತೆಗೆ ವೈಜ್ಞಾನಿಕ ನೆಲೆಯಲ್ಲಿ ಕೂಡ ಪಂಚಾಂಗವನ್ನು ನೋಡಬೇಕಿದೆ.  ನಮ್ಮ  ಮನೆಯ ಮೂಲೆಯಲ್ಲೆಲ್ಲೋ ತೂಗು ಬಿದ್ದಿರುವ, ಗಣಿತಗಳ ಮಾಯಾಲೋಕವನ್ನೇ ಹೊಂದಿರುವ, ಪಂಚಾಂಗವನ್ನು ನೋಡುವ ದೃಷ್ಟಿ ಬದಲಾಗಬೇಕಿದೆ. ಇದನ್ನು ದೈನಂದಿನ ವ್ಯವಸ್ಥೆಗೆ ಒಗ್ಗಿಸುವ ಕೆಲಸ ಆಗಬೇಕಿದೆ.
ಏಕೆಂದು ಇಲ್ಲಿದೆ, ಶುಕ್ಲಪಕ್ಷ ಚಂದ್ರನ ಕಲಾಪೂರ್ಣತೆಯ‌ ಸಂಕೇತವಾದರೆಕೃಷ್ಣ ಪಕ್ಷ ಕಲಾಹೀನತೆಯ ಸಂಕೇತ.
ಚಂದ್ರ ಸೂರ್ಯರ ನೆರಳು ಬೆಳಕಿನ ಸೋಜಿಗ.ಇದರಲ್ಲಿರವ ಬೆಳಕು-ನೆರಳಿನಾಟವನ್ನು, 
ಭೂಮಿ- ಸೂರ್ಯ-ಚಂದ್ರರ ಗತಿವಿಶೇಷವನ್ನು ನಮ್ಮ ಭಾರತೀಯ ಕಾಲಗ ಣನೆ ಗುರುತಿಸಿದೆ. 

ಇದೇ ಹಿನ್ನೆಲೆಯಲ್ಲಿ, ಬೇರೆ ಯಾವ ಕಾಲಗಣನೆ ಯಲ್ಲೂ ಇಲ್ಲದ ತಿಂಗಳ ಅರ್ಧ ಭಾಗಕ್ಕೆ ಹೆಸರು ನೀಡಿದ ವಿಜ್ಞಾನವನ್ನು ಅನುಸರಿಸಿರುವ ಸಂಸ್ಕೃತಿ ನಮ್ಮದು. ಅದಕ್ಕೆ "ಪಕ್ಷ" ಎಂಬ ಅಭಿಧಾನ. 

ಹೌದು , ಚಂದ್ರನ ಪೂರ್ಣತೆಯನ್ನುಶುಕ್ಲಪಕ್ಷ ಎಂದು ಹೇಳಿದರೆ ಅದರ ಕಳಾಹೀನತೆಯನ್ನು ಸೂಚಿಸುತ್ತ "ಕೃಷ್ಣಪಕ್ಷ" ಎಂದು ಹೇಳಲಾಗಿದೆ. ಇದು ನಮ್ಮ ಪಂಚಾಂಗ ದ ವೈಶಿಷ್ಟ್ಯ ವೈಜ್ಞಾನಿಕ ಚಿಂತನೆ.

ಹೀಗೆ ಆಚರಿಸಿಕೊಂಡು ಬಂದ ಸ್ವರೂಪ ಅತ್ಯಂತ ಶ್ಲಾಘನೀಯ. 
ಕೇವಲ "ಮಾಸದ" ಗಣನೆಯಷ್ಟೇ ಅಲ್ಲದೇ ಅದರಲ್ಲಿನ ಕಾಲಚಕ್ರದ ಸಂಕೇತಗಳಾದ ಸೂರ್ಯ ಹಾಗೂ ಚಂದ್ರರ ಗತಿವಿಶೇಷಗಳ  ಚಿಂತನೆಯು ಅರ್ಥಪೂರ್ಣ ಎಂಬುದು  ನಮ್ಮ ಹೆಮ್ಮೆಗೆ ಕಾರಣವಾಗಬೇಕು.ಶುಭಕೃತ್  ಈ ವರ್ಷದ ನಾಮಧೇಯ. 
ಕೊವಿಡ್ 19 ಆಗಮಿಸಿದ್ದಾಗ ವಿಕಾರಿ ಎಂಬ ಸಂವತ್ಸರದ ಕೊನೆಯ ಕೆಲವು ದಿನಗಳು ಉಳಿದಿದ್ದವು. ಕಲಿಯುಗದ 5121ನೇ ವರ್ಷವಾಗಿತ್ತು. 
ಆ ಹೆಸರೇ ಆ ವರ್ಷದ ಸ್ವರೂಪ ವಾಚಕವಾಗಿದ್ದನ್ನು ನೆನಪಿಸಿಕೊಳ್ಳಬೇಕಿದೆ. ಜಗತ್ತೆಲ್ಲ ವಿಕಾರವನ್ನು ಹೊಂದುವಂತೆ ಕೋವಿಡ್ ನಿಂದ ನಾವೆಲ್ಲರೂ ಬಾಧಿತರಾದೆವು. ಅದಾದ ಮೇಲೆ  ಶಾರ್ವರಿ (5122ನೇ ಕಲಿವರ್ಷ) ನಾಮಕ ಸಂವತ್ಸರದ ಆಗಮನ. ಇದರಲ್ಲಿ  ಕೋವಿಡ್ ದ ದುಷ್ಪರಿಣಾಮ ಹೊಂದಿದ್ದೆವು. ಶರ್ವನೆಂದರೆ ಶಿವ. ಶಿವನ ಪತ್ನೀ ದುರ್ಗೆಯೇ ಶಾರ್ವರಿ. ಆ ವರ್ಷ ಪೂರ್ಣ  ಆ ಮಹಾತಾಯಿಯ ಅನುಗ್ರಹ ವಿಶೇಷ ನಮ್ಮನ್ನು ಕಾಪಾಡಿತ್ತು. ಉಳಿದೆಲ್ಲ ದೇಶಗಳಿಗಿಂತ ನಮ್ಮ ದೇಶ ಕೊವಿಡ್ 19  ನ್ನು ಹೆಚ್ಚು ಯಶಸ್ವಿ ಯಾಗಿ ಎದುರಿಸಿತ್ತು.‌ ಜಗತ್ತಿನಲ್ಲಿ‌ ಭಾರತದ ವರ್ಚಸ್ಸು ಹೆಚ್ಚಿತ್ತು. ಇದಾದ ಮೇಲೆ ಪ್ಲವ ನಾಮಕ ಸಂವತ್ಸರ( 5123ನೇ ಕಲಿವರ್ಷ).
ಪ್ಲವ ಎಂದರೆ ದೋಣಿ / ತೆಪ್ಪ ಎಂದರ್ಥ. ನಾವು ಈ ರೋಗರುಜಿನಗಳೆಂಬ ಪ್ರವಾಹದ ವಿರುದ್ಧ ಈಜಿ ದಡ ಸೇರಲು ಬಂದ ಆಲಂಬನದ ವರ್ಷವಿದು. ನಮ್ಮ ದೇಶೀಯ ಕಾಲಗಣನೆ ಎಷ್ಟೊಂದು ವೈಜ್ಞಾನಿಕವಾಗಿದೆ ಎಂದು ನೀವೇ ಯೋಚಿಸಿ. ಇದಾದ ಮೇಲೆ ಇದೀಗ ನಡೆಯುತ್ತಿರುವ ಶುಭಕೃತ್ ಸಂವತ್ಸರ. ( 5124ನೇ ಕಲಿ ವರ್ಷ) ಸಕಲತ್ರ ಕ್ರಿಯಾಶೀಲವಾಗಿ ಕೆಲಸ ಕಾರ್ಯಗಳು ಆರಂಭವಾಗಿ ಮುಂದೆ ಸಾಗಿ ಶುಭದತ್ತ ಸಾಗಿದ್ದೇವೆ. ಸಂವತ್ಸರ ನಾಮಗಳೂ ಇಷ್ಟು ವಿಶೇಷತೆಯನ್ನು ಹೊಂದಿವೆ. ಹೆಸರೇ ಎಲ್ಲವನ್ನೂ ಸೂಚಿಸುತ್ತದೆ ಎಂಬರ್ಥವಲ್ಲ. ಆದರೆ ಸಂವತ್ಸರ ಗಳ ಹೆಸರಲ್ಲೂ ನಮ್ಮ ಕಾಲಗಣನೆಯ ವಿಜ್ಞಾನ ವಿಶೇಷ‌ ಇದೆ ಎಂಬುದನ್ನು ತಿಳಿಸಲು ಮಾತ್ರ ಇದನ್ನು ಸ್ಮರಿಸಿಕೊಂಡಿದ್ದೇನೆ.
ಮುಂದೆ, 
 ಉತ್ತರಾಯಣ ಸೂರ್ಯಗತಿವಿಶೇಷದ ಸೂಚನೆ ನೀಡುವ ಕಾಲಮಾನ.
"ಹೇಮಂತ-ಋತು" ಸೂರ್ಯಚಂದ್ರರ ಗತಿವಿಶೇಷವನ್ನು  ಸಾರುವ ಕಾಲವ್ಯವಸ್ಥೆ. ಋಕ್ ಹಾಗೂ ತೈತ್ತಿರೀಯಾದಿಗಳಲ್ಲಿ ಪೂರ್ವಾಪರಂ ಚರತೋ ಮಾಯಯೈತೌ ..... ಎಂಬುದು ಚಂದ್ರಮಾಃ ಷಡ್ಢೋತಾ , ಸ ಋತೂನ್ ಕಲ್ಪಯಾತಿ" ಎಂಬುದು ಇದರ ವಿಶೇಷತೆ ತಿಳಿಸಿವೆ. 
*ಎಷ್ಟೊಂದು ಅದ್ಭುತ ಈ ನಮ್ಮ ವ್ಯವಸ್ಥೆ!!!!*

ಯುಗ-ಯುಗಾನ್ತರದಷ್ಟು‌ ಪ್ರಾಚೀನವಾದ‌  "ಪೌರಾಣಿಕ ಇತಿಹಾಸ" ಹೊಂದಿರುವ,  ಐದು ಸಾವಿರಕ್ಕೂ ಮಿಕ್ಕಿ "ಕಲಿಯುಗದ" ಅವಧಿಯನ್ನು ಸೂಚಿಸುವ ಪಂಚಾಗ ಅರ್ಥಾತ್ ಕಾಲಗಣನೆಯನ್ನು ಹೊಂದಿರುವ ದೇಶ ನಮ್ಮದು‌. ಇದು ಹೆಮ್ಮೆಯ ವಿಷಯ ಅಲ್ಲವೆ!?? ಹೌದು ಭಾರತೀಯ ಕಾಲಮಾನದಲ್ಲಿ ಇದೀಗ ಕಲಿಯುಗದ 5124ನೆ ವರ್ಷ ನಡೆಯುತ್ತಿದ್ದೆ. ಶಾಲಿವಾಹನ ಹಾಗೂ ವಿಕ್ರಮ ನಮ್ಮ ಹೆಮ್ಮೆಯ ಶಕ ಪುರುಷರು.  ಈ ಸಮಗ್ರ ಕಾಲಮಾನವನ್ನು ನಿಖರವಾಗಿ ತಿಳಿಸುವ "ಕಾಲಗಣನಾಶಾಸ್ತ್ರ"ವನ್ನು ಹೊಂದಿರುವ ಭಾರತದೇಶ, ಭರತಖಂಡ ನಮ್ಮದು.   ಒಮ್ಮೆ ನಮ್ಮ ಪಂಚಾಂಗವನ್ನು ಗಣಿತ ಹಾಗೂ ವಿಜ್ಞಾನದ ಕನ್ನಡಕಗಳನ್ನು ಧರಿಸಿ ನೋಡಿ . ಗಣಿತ ಹಾಗೂ ಖಗೋಳ ವಿಜ್ಞಾನದ ದೃಷ್ಟಿಗೆ ಬದಲಾಗಲೇ ಬೇಕಾದ ಸಂದಿಗ್ಧವಾದ ಕಾಲಘಟ್ಟದಲ್ಲಿ ನಾವಿದ್ದೇವೆ.
ಒಮ್ಮೆ ನಮ್ಮ ಪಂಚಾಂಗವನ್ನು ಗಣಿತದ ನೆಲೆಯಲ್ಲಿ ತೆರೆದು ನೋಡಿ. ಅಲ್ಲಿ ಕಾಣುವುದೆಲ್ಲ ಅದ್ಭುತ ಎನಿಸುವ ಗಣಿತದ ಸೂಕ್ಷ್ಮ - ಅತಿಸೂಕ್ಷ್ಮ ಲೆಕ್ಕಾಚಾರಗಳ ಗೋಚರವಾಗುತ್ತದೆ. ಶಬ್ದಗಳಿಗಿಂತ ಸಂಖ್ಯೆಗಳೆ ಹೆಚ್ಚು ಕಾಣುತ್ತವೆ .
ಒಮ್ಮೆ ವಿಜ್ಞಾನ ದ ದೃಷ್ಟಿಯಿಂದ ಪಂಚಾಂಗ ಬಿಡಿಸಿ ನೋಡಿ ಅಲ್ಲಿ ಕಾಣುವುದೆಲ್ಲ ಖಗೋಳದ ವಿಸ್ಮಯಗಳನ್ನು ಬಿಚ್ಚಿಡುವ ಖಗೋಳ-ಭೂಗೋಳ ಕಾಲಗಣನೆಗಳ ಅನುಪಮ ವಿಷಯಗಳಾಗಿ ಕಾಣುವುದು .
ಪೂರ್ವಗ್ರಹ ತೊರೆಯೋಣ, ನಮ್ಮ ಋಷಿಮಾನಸದ  ಅನುಗ್ರಹವಾದ ನಮ್ಮ  ಕಾಲಮಾನವನ್ನು ಅನುಸರಿಸಿ ಸಕಲರಿಗೆ ಇದನ್ನು ತಿಳಿಸೋಣ. ಇಂತಹ ಕಾಲಗಣನೆ ಶಾಸ್ತ್ರ ಕೂಡ ಆಗಾಗ ಪರಿಷ್ಕೃತವಾಗುತ್ತಾ ಸಾಗಿತ್ತು.
ಅನೇಕ ಗ್ರಂಥಗಳ ರಚನೆ ಕೂಡ ಆಗಿದ್ದಾವೆ. ಗಣಿತ ಹೋರಾ ಸ್ಕಂಧ ಇತ್ಯಾದಿ ವಿಭಾಗಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದಾಗಿದೆ.
 ಅನೇಕ ಶೋಧನೆಗಳು ಈ ಮುಖೇನ ನಡೆದಿದೆ. ಈ ಕಾಲಗಣನೆ ನಮ್ಮ ಬದುಕಿನ ಪೂರ್ವ ಮತ್ತು ಅಪರಗಳನ್ನೂ ಅರ್ಥಾತ್ ನಮ್ಮ ಭೂತ ಕಾಲ ಮತ್ತು ಭವಿಷ್ಯತ್ ಕಾಲದ ಬಗೆಗೆ ಮಾಹಿತಿ ನೀಡುವಂತ ಸಾಮರ್ಥ್ಯ ಹೊಂದಿದೆ. ಗ್ರಹಗತಿಗಳ ಪರಿಣಾಮವು ಸಾರ್ವಜನಿಕ ಹಾಗೂ ವ್ಯಕ್ತಿಗತವಾಗಿ ಆಗುವುದನ್ನು ಊಹಿಸಿ, ಅದನ್ನು ಪರೀಕ್ಷೆಗೆ ಒಳಪಡಿಸಿ ನಿರಂತರ ಅನುಸಂಧಾನ ಮಾಡಿದ್ದೂ ಇದೆ. ಈ ಕಾಲ ಗಣನೆಯ ಆಧಾರದಲ್ಲೇ ನಮ್ಮ ಭವಿಷ್ಯ ತಿಳಿಸುವ ಜ್ಯೋತಿಷ್ಯ ಕೂಡ ಆರಂಭವಾಯಿತು.‌ ಇದೂ ಕೂಡ ಭಾರತೀಯ ಕಾಲ ಗಣನೆ ಯ ಹಿರಿಮೆಗಳಲ್ಲಿ ಅತ್ಯಂತ ಶ್ರೇಷ್ಠ ವಾದುದು. ಈ ಭವಿಷ್ಯ ಚಿಂತನೆಯನ್ನು ಕಾಲ ಗಣನೆಯಲ್ಲಿ ತೋರಿಗೊಟ್ಟ ಏಕೈಕ ಕಾಲ ಗಣನ ವಿಜ್ಞಾನ ನಮ್ಮ ಭಾರತದ ಕಾಲಗಣನೆ ಎಂಬುದನ್ನು ನಾವೆಲ್ಲ ಇವತ್ತಿನ ಈ  ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಿದೆ. ಯುವ ಜನಾಂಗ ಈ ಕುರಿತು ವಿಶೇಷ ಲಕ್ಷ ನೀಡಬೇಕಿದೆ. 
     ಅಂಧಕಾರದಲ್ಲಿಟ್ಟು ನಮ್ಮ  ಜೀವನವನ್ನೂ ಜೀವನವ್ಯವಸ್ಥೆಯನ್ನೂ ಸಮಗ್ರವಾದ ಭಾರತೀಯ ಆರ್ಷ ಪರಂಪರೆಯ ಬದುಕನ್ನೂ, ಈ ನಮ್ಮ ಕಾಲಮಾನವನ್ನೂ ಬುಡಮೇಲು ಮಾಡಿ,  ಶಿಕ್ಷಣದಿಂದ ಆರಂಭಿಸಿ ಸಕಲತ್ರ ನಮ್ಮತನ್ನವನ್ನೇ ನಾಶಮಾಡಿದ, ಹೀಗೆ, ಇಡೀ ಭಾರತೀಯ ಜೀವನ ವ್ಯವಸ್ಥೆಗೆ ಕೊಡಲಿ ಏಟು  ನೀಡಿದವರಿಗೆ  ಭಾರತೀಯ ಕಾಲ ಮಾನವನ್ನು  ಮತ್ತೊಮ್ಮೆ ತಿಳಿಸೋಣ. 
 

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...