ಪಂಚಭೂತಗಳು ಎಂಬುದಂತೂ ಸೂರ್ಯಸ್ಪಷ್ಟ. ಮಾತ್ರವಲ್ಲ, ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಪಂಚಭೂತಗಳಲ್ಲಿ ಕೊನೆಯದಾದ ಭೂಮಿಯ ವಿಸ್ತಾರ ಅತ್ಯಂತ ಕಿರಿದು. ನಂತರದ ಸ್ಥಾನದಲ್ಲಿ ನೀರಿದೆ. ಇಂಥ ನೀರಿನ ಸೃಷ್ಟಿಯಾದದ್ದು ವೈಶಾಲ್ಯದಲ್ಲಿ ನೀರಿಗಿಂತಲೂ ಹಿರಿದಾದ ವಾಯು ಮತ್ತು ಅಗ್ನಿಗಳ ಸಂಯೋಜನೆಯಿಂದ. ವಿಜ್ಞಾನವೂ ಅದನ್ನೇ ಹೇಳುತ್ತದಲ್ಲವೇ ? ನೀರಿನ ಸೂತ್ರವನ್ನೊಮ್ಮೆ ಗಮನಿಸಿ. H2O ಅಂದರೆ ಆಮ್ಲಜನಕವಿಲ್ಲದೇ ನೀರಿನ ಅಸ್ತಿತ್ವವೇ ಇಲ್ಲ. ಇಲ್ಲಿ ಜಲಜನಕವೇ ದಹ್ಯವಸ್ತು. ಅಂದರೆ ಅಗ್ನಿ. ಎರಡು ಪಟ್ಟು ಅಗ್ನಿ ಹಾಗೂ ಒಂದು ಪ್ರಮಾಣದ ವಾಯು ಸೇರಿ ನೀರಿನ ಹುಟ್ಟು ಆಗಿದೆ.
ಇದೇ ತತ್ತ್ವದಲ್ಲಿಯೇ ಪರ್ಜನ್ಯ ಯಾಗವೂ ನಡೆಯುತ್ತದೆ ಎನ್ನುತ್ತದೆ ವೇದ ವಿಜ್ಞಾನ. ಯಜ್ಞ ಯಾಗಾದಿಗಳು ಅಗ್ನಿಯಿಲ್ಲದೇ ಪರಿಪೂರ್ಣಗೊಳ್ಳಲು ಸಾಧ್ಯವೇ ಇಲ್ಲ. ಅದೇ ಹೋಮ ಹವನಾದಿಗಳ ಮೂಲ. ಹವಿಸ್ಸಿನ ಅರ್ಪಣೆಯಾಗುವುದೇ ಪ್ರತಿಷ್ಠಾಪಿತ ಅಗ್ನಿಯಲ್ಲಿ. ಇಂಥ ಪ್ರಕ್ರಿಯೆಯಲ್ಲಿಯೇ ಹೈಡ್ರೋಜನ್ ಮತ್ತು ಆಕ್ಸಿಜನ್ ಗಳು ಸಂಯೋಜನೆಗೊಳ್ಳುತ್ತವೆ. ಇದು ಮಳೆಗೆ ಕಾರಣವಾಗುತ್ತದೆ. ಪಾರಂಪರಿಕ ಭಾರತದಲ್ಲಿ ನಡೆಸಿಕೊಂಡು ಬಂದಿರುವ ಇಂಥ ಯಾಗ ಆಧುನಿಕ ವಿಜ್ಞಾನಕ್ಕಿಂತಲೂ ಹೆಚ್ಚು ವಿಶ್ವಾಸಾರ್ಹವೆನ್ನುತ್ತಾರೆ ವೇದ ವಿದ್ವಾಂಸರು. ಮೋಡ ಬಿತ್ತನೆಯಿಂದ ಮಳೆ ಬಾರದಿರಬಹುದು. ಅಥವಾ ಇನ್ನೆಲ್ಲೋ ಮೋಡಗಳು ಚದುರಿ ಹೋಗಬಹುದು. ಆದರೆ ವೇದೋಕ್ತ ಕ್ರಿಯೆಯಿಂದ ಮಳೆ ಬಾರದಿರಲು ಸಾಧ್ಯವೇ ಇಲ್ಲ ಎಂಬ ವಿಶ್ವಾಸವನ್ನವರು ವ್ಯಕ್ತಪಡಿಸುತ್ತಾರೆ. ಮಾತ್ರವಲ್ಲ ಅದಕ್ಕೆ ಸಾಕಷ್ಟು ಆಧಾರವನ್ನೂ ಒದಗಿಸುತ್ತಾರೆ.
ಬಿಲಿಯಾಂತರ ವರ್ಷಗಳ ಹಿಂದೆ ವಿಶ್ವ ಈಗಿನ ಸ್ಥಿತಿಗೆ ಬರಲು ಇಟ್ಟ ಮೊದಲ ಹೆಜ್ಜೆ ‘ಮಹಾ ಸ್ಪೋಟ. ಅಣು ಪರಮಾಣುಗಳ ಸಂಫರ್ಷ ಇದಕ್ಕೆ ಕಾರಣವೆನ್ನುವುದು ಇಂದಿಗೂ ಥಿಯರಿಯಷ್ಟೆ. ಅಂದು ಆದ ಆ ಸ್ಫೋಟಕ್ಕೆ ಅಗಾಧ ಪ್ರಮಾಣದ ಶಕ್ತಿ ವ್ಯಯವಾಗಿತ್ತು ಅನ್ನುವ ಅಂದಾಜು ಮಾತ್ರ ನಮ್ಮಲ್ಲಿದೆ. ಆದರೆ ಅದು ಎಷ್ಟರಮಟ್ಟಿಗಿನದು ಎಂಬುದರ ಅರಿವಿಲ್ಲ. ಏಕೆಂದರೆ ಇಂದಿಗೂ ವಿಶ್ವದ ಶೇ.96 ಭಾಗವನ್ನ ತನ್ನಲ್ಲಡಗಿಸಿಕೊಂಡಿದೆ ಎನ್ನಲಾದ ಡಾರ್ಕ್ ಪಾರ್ಟಿಕಲ್ಸ್ ಗಳ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ. ಆದರೆ ಇದನ್ನೇ ಹಿರಣ್ಯಗರ್ಭವೆಂದು ಹೇಳುವ ವೇದಗಳು ಬ್ರಹ್ಮಾಂಡ ಸೃಷ್ಟಿಗೆ ಕಾರಣವಾದ ಹಿರಣ್ಯಗರ್ಭನ ಬಗ್ಗೆ ವೇದಗಳಲ್ಲಿ ಡಾರ್ಕ್ ಪಾರ್ಟಿಕಲ್ಸ್ ಎಂಬುದೇ ಇಲ್ಲ. ವಿಜ್ಞಾನದಲ್ಲಿ ‘ಹಿಗ್ಸ್ ಬೊಸನ್ ಎಂಬ ಕಣದ ಬಗ್ಗೆ ಅರಿಯಲು ಬಿಗ್ ಬ್ಯಾಂಗ್ ಅಣಕು ನಡೆದಿದೆ. ಆದರೆ, ಮಹಾಸ್ಪೋಟದ ಪ್ರಾಥಮಿಕ ಹಂತದ ಒಂದು ಅವಸ್ಥೆಯನ್ನ ಮಾನವ ನಿಯಂತ್ರಿತ ವ್ಯವಸ್ಥೆಯಲ್ಲಿ ನಿರ್ಮಿಸುವ ಪ್ರಯತ್ನ ವೇದಗಳಲ್ಲಿ ಪರ್ಜನ್ಯ ಹವನದಿಂದ ಆಗುತ್ತದೆ ಎಂದರೆ ಅಚ್ಚರಿಪಡಬೇಡಿ.
ವೇದ, ಪುರಾಣಗಳ ಕಾಲದಿಂದಲೂ ಪರ್ಜನ್ಯದ ಆಚರಣೆ ಅಸ್ತಿತ್ವದಲ್ಲಿದೆ. ಶತ, ಶತಮಾನಗಳಿಂದ ಈ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ವಿವಿಧ ಶಾಸ್ತ್ರ, ಪುರಾಣಗಳು ಪರ್ಜನ್ಯಕ್ಕೆ ವಿವಿಧ ರೀತಿಯ ಅರ್ಥ, ವ್ಯಾಖ್ಯಾನ ನೀಡಿವೆ. ಋಗ್ವೇದದ ಪ್ರಕಾರ, ಪರ್ಜನ್ಯವೆಂದರೆ ಮಳೆಯ ದೇವರು ಎಂದರ್ಥ. ಮಳೆಗಾಗಿ ವರುಣದೇವನನ್ನು ಪ್ರಾರ್ಥಿಸುವ ಮಂತ್ರಗಳು ಅಥರ್ವಣ ವೇದದಲ್ಲಿ ನಮಗೆ ಕಾಣ ಸಿಗುತ್ತವೆ. ಐದನೇ ಮನ್ವಂತರದ ಪ್ರಕಾರ ಪರ್ಜನ್ಯ ಎಂಬಾತ ಸಪ್ತ ಋಷಿಗಳಲ್ಲಿ ಒಬ್ಬ. ಹರಿವಂಶ ಹೇಳುವಂತೆ ಈತ ಒಬ್ಬ ಗಂಧರ್ವ.
72 ರಶ್ಮಿಗಳ ಪೈಕಿ ಪರ್ಜನ್ಯ ಕೂಡ ಒಂದು ಹಾಗೂ ಇದು ಶ್ರವಣ ತಿಂಗಳಿನಲ್ಲಿ ಪ್ರಕಾಶಿಸುತ್ತದೆ. ವಿಷ್ಣು ಪುರಾಣದ ಪ್ರಕಾರ, ಈತ 12 ಮಾಸಗಳಲ್ಲಿ ಒಂದಾದ ಕಾರ್ತಿಕದ ಪೋಷಕನಾದ ಆದಿತ್ಯ. ಪರ್ಜನ್ಯನನ್ನು ಪೃಥ್ವಿಯ ಪತಿ ಎಂದೂ ಸಾಂಕೇತಿಕವಾಗಿ ಗುರುತಿಸಲಾಗುತ್ತದೆ. ಈತ ಲೋಕರಕ್ಷಕನಾದ ಲೋಕಪಾಲನೂ ಹೌದು. ಹೀಗಾಗಿ ಆತನ ಆರಾಧನೆ ಭೂಮಿಗೆ ಸಮೃದ್ಧಿ ತರುತ್ತದೆ.
ಅಗ್ನೇರ್ವೈ ಧೂಮೋ ಜಾಯತೇ ಧುಮದಭ್ರಮಭ್ರಾದ್
ವೃಷ್ಟಿರಗ್ನೇರ್ವಾ ಏತ ಜಾಯಂತೆ....
ಶತಪಥ ಬ್ರಾಹ್ಮಣದ ಶ್ಲೋಕವೊಂದು ಯಾಗದಿಂದ ಮಳೆಯ ಸೃಷ್ಟಿಯನ್ನು ಹೀಗೆ ಖಚಿತಪಡಿಸುತ್ತದೆ. ಹೋಮಗಳನ್ನು ಮಾಡುವಾಗ ಹವಿಸ್ಸಿನ ರೂಪದಲ್ಲಿ ಅಜ್ಯ(ತುಪ್ಪ), ಚರು(ವಿವಿಧ ಧಾನ್ಯಗಳು), ಸಮಿತ್ತು(ನಾನಾ ಸಸ್ಯಗಳ ಭಾಗ) ಸುಗಂಧ ಭರಿತ ವಸ್ತುಗಳು, ಫಲಾದಿಗಳನ್ನು ಅರ್ಪಿಸುವುದು ಸಹಜ. ಇದರಿಂದ ಬೆಂಕಿಯಿಂದ ಧೂಮ ಹೊರಹೊಮ್ಮುತ್ತದೆ. ಅದರೊಂದಿಗೆ ಆವಿಯೂ ಮೇಲೇರುತ್ತದೆ. ಅಗ್ನಿಯ ವಿಶೇಷ ಗುಣವೆಂದರೆ ಅದು ದಹಿಸಿದ ವಸ್ತುಗಳನ್ನು ವಿಭಜಿಸುತ್ತದೆ. ಪದಾರ್ಥಗಳಲ್ಲಿ ಪ್ರವೇಶಿಸಿ ಅದನ್ನು ವಿಭಜಿಸುವ ಅಗ್ನಿ ನೀರಿನ ಅಂಶವನ್ನು ಬೇರ್ಪಡಿಸುತ್ತದೆ. ಹೀಗೆ ವೃಕ್ಷ, ವನಸ್ಪತಿ ಹಾಗೂ ಓಷಗಳಿಂದ ಬೇರ್ಪಟ್ಟು ಆವಿಯ ರೂಪದಲ್ಲಿ ಮೇಲೇರುವ ತೇವಾಂಶವನ್ನು ಬಾಷ್ಪ ಎಂದು ಕರೆಯಲಾಗುತ್ತದೆ. ಇಂಥ ಬಾಷ್ಪ ಗಾಳಿಗಿಂತಲೂ ಅತ್ಯಂತ ಹಗುರವಾಗಿರುತ್ತದೆ. ಹೀಗಾಗಿ ಅದು ಮೇಲೇರಿ ನಭೋ ಮಂಡಲಕ್ಕೆ ಸೇರುತ್ತದೆ. ಅಂಥ ಬಾಷ್ಪದಲ್ಲಿ ಸ್ನಿಗ್ಧರಹಿತವಾದ ಪೃಥ್ವಿಯ ಅಂಶವೂ ಸೇರಿಕೊಂಡು ಶುಷ್ಕವಾದಾಗ ಧೂಮ ಏಳುತ್ತದೆ. ಇಂಥ ಧೂಮ ನಭೋಮಂಡಲ ಸೇರಿದಾಗ ಆಲ್ಲಿನ ತಣ್ಣನೆಯ ಸ್ಪರ್ಶಕ್ಕೆ ಒಳಪಡುತ್ತದೆ. ಆಗಲೇ ನಭೋಮಂಡಲದಲ್ಲಿ ಮೇಘದ ರೂಪದಲ್ಲಿ ಜಲ ಸಂಚಯವಾಗುವುದು. ವಾಯುಮಂಡಲದಲ್ಲಿನ ಅಂಥ ನೀರಿನ ಸೂಕ್ಷ್ಮ ಕಣಗಳಿಂದ ಮಳೆಯ ರೂಪ ತಾಳಿ ಅವು ಭಾರವಾಗಿ ಪುನಃ ಹೋಮಿಸಿದ ಸ್ಥಳದಲ್ಲಿಯೇ ಸುರಿಯುತ್ತದೆ. ವಾಯುವಿನ ಇಂಥ ದಳವನ್ನೇ ನಾವು ವಾದಲ್ ಅಥವಾ ಹಿಂದಿಯ ಬಾದಲ್ ಎಂದು ಗುರುತಿಸುವುದು. ಬಾದಲ್ ಅಂದರೆ ಮೋಡ. ಇಂಥ ವಾದಲ್ ನ ಸೃಷ್ಟಿಯಲ್ಲಿ ಹವನದ ಹವಿರ್ಭಾಗ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಆಧುನಿಕ ವಿಜ್ಞಾನದ ಭಾಷೆಯಲ್ಲಿ ಜಟಿಲವಾದ ಪಾರಿಭಾಷಿಕ ಪದಗಳೊಂದಿಗೆ ಕಗ್ಗಂಟಾಗಿ ಬಿಡಬಹುದಾಗಿದ್ದ ವಿಷಯವೊಂದು ವೇದದಲ್ಲಿ ಸರಳವಾಗಿ ಮಂಡಿತವಾಗಿದೆ. ಆದರೆ ಪೂರ್ವಗ್ರಹ ಬಿಟ್ಟು ಅದನ್ನು ನೋಡಬೇಕಷ್ಟೆ.
ಲಾಸ್ಟ್ ಡ್ರಾಪ್: ಭೂಮಿ, ನೀರು ಮುಂತಾದ ಸೃಷ್ಟಿಯ ಆದಿಯ ವಿಷಯದಲ್ಲಿ ವಿಜ್ಞಾನ ಸುಳ್ಳಾಗಬಹುದು, ಗಾದೆ ಸುಳ್ಳಾಗಬಹುದು, ಆದರೆ ವೇದ ಸುಳ್ಳಾಗದು!


No comments:
Post a Comment